ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಈ ಆವೃತ್ತಿಯಲ್ಲಿ ತಂಡವಾಗಿ ಲಕ್ನೋ ಸೂಪರ್‌ಜೈಂಟ್ಸ್ ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ, ಕೆಲ ಆಟಗಾರರ ವೈಯಕ್ತಿಕ ಆಟ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.
ಅದರಲ್ಲೂ ಯುವ ವೇಗಿ ಪ್ರಿನ್ಸ್ ಯಾದವ್ ತಮ್ಮ ಶಿಸ್ತುಬದ್ಧ ಬೌಲಿಂಗ್ ಮೂಲಕ ವಿಶೇಷ ಮೆಚ್ಚುಗೆ ಗಳಿಸಿದ್ದಾರೆ. ಪ್ರಮುಖ ಕ್ಷಣಗಳಲ್ಲಿ ವಿಕೆಟ್ ಕಬಳಿಸುವ ಸಾಮರ್ಥ್ಯದಿಂದ ಅವರು ಇದೀಗ ರಾಷ್ಟ್ರೀಯ ತಂಡದ ಆಯ್ಕೆ ಚರ್ಚೆಯಲ್ಲಿದ್ದಾರೆ.
ಈ ಸೀಸನ್‌ನಲ್ಲಿ ಲಕ್ನೋ ಪರ ಆಡಿದ 10 ಪಂದ್ಯಗಳಲ್ಲಿ ಪ್ರಿನ್ಸ್ ಯಾದವ್ 16 ವಿಕೆಟ್ ಪಡೆದು ಮಿಂಚಿದ್ದಾರೆ. ಕಡಿಮೆ ರನ್ ನೀಡುತ್ತಾ ಎದುರಾಳಿ ಬ್ಯಾಟರ್‌ಗಳ ಮೇಲೆ ಒತ್ತಡ ಹೇರುವಲ್ಲಿ ಅವರು ಯಶಸ್ವಿಯಾಗಿದ್ದು, ಆರ್‌ಸಿಬಿ ವಿರುದ್ಧದ ಪಂದ್ಯದಲ್ಲೂ ಮೂರು ಮಹತ್ವದ ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ದೊಡ್ಡ ಪಾತ್ರವಹಿಸಿದ್ದರು.
ಇದನ್ನೂ ಓದಿ:
ಇದೀಗ ಮುಂದಿನ ಟಿ20 ಸರಣಿಗೆ ಪ್ರಿನ್ಸ್ ಯಾದವ್ ಹೆಸರನ್ನು ಪರಿಗಣಿಸುವ ಸಾಧ್ಯತೆಗಳ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ವೇಗ, ನಿಯಂತ್ರಣ ಮತ್ತು ಡೆತ್ ಓವರ್‌ಗಳಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡುವ ಸಾಮರ್ಥ್ಯವೇ ಅವರಿಗೆ ಬಲವಾಗಿದೆ.
ಇನ್ನೊಂದೆಡೆ, ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾಗೆ ಮುಂದಿನ ದಿನಗಳಲ್ಲಿ ಕೆಲಸದ ಒತ್ತಡ ಕಡಿಮೆ ಮಾಡಲು ಆಯ್ಕೆ ಸಮಿತಿ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆ ಟಿ20 ಮಾದರಿಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಚಿಂತನೆ ನಡೆಯುತ್ತಿದ್ದು, ಆ ಪಟ್ಟಿಯಲ್ಲಿ ಪ್ರಿನ್ಸ್ ಯಾದವ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ವೇಗಿಯ ಈ ಏರಿಕೆ ಭಾರತೀಯ ಕ್ರಿಕೆಟ್‌ಗೆ ಹೊಸ ಭರವಸೆ ಮೂಡಿಸಿದೆ.



