May 8, 2026
Friday, May 8, 2026
spot_img

ಮಕ್ಕಳ ಅಪರಾಧಕ್ಕೆ ಪೋಷಕರಿಗೆ ಬಿತ್ತು ತಲೆದಂಡ: 25,000 ರೂ. ಫೈನ್ ಕಟ್ಟಬೇಕಂತೆ; ಏನ್ ಕೇಸ್ ಇದು?

ಹೊಸದಿಗಂತ ವರದಿ ವಿಜಯಪುರ:

ಮೂವರು ಅಪ್ರಾಪ್ತ ದ್ವಿಚಕ್ರ ವಾಹನ ಸವಾರರ ಪೋಷಕರಿಗೆ ತಲಾ 25,000 ರೂ. ದಂಡ, ಒಂದು ವರ್ಷ ವಾಹನಗಳ ನೋಂದಣಿ ರದ್ದತಿ ಹಾಗೂ ಅಪ್ರಾಪ್ತ ಬಾಲಕರು 25 ವರ್ಷದವರಾಗುವವರೆಗೆ ವಾಹನ ಪರವಾನಿಗೆ ನೀಡದಂತೆ ಶಿಕ್ಷೆ ವಿಧಿಸಿ ನಗರದ 4ನೇ ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾಯಾಲಯ ಮತ್ತು ಜೆಎಮ್‌ಎಪ್ಸಿ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.

ನಗರದ ವಾಜಪೇಯಿ ರಸ್ತೆ, ಬಿಎಲ್‌ಡಿಇ ರಸ್ತೆ ಹಾಗೂ ಲಿಂಗದ ಗುಡಿ ರಸ್ತೆ ಬಳಿ ಮೇ 7, 2026 ರಂದು ವಿಜಯಪುರ ಸಂಚಾರಿ ಠಾಣೆ ಅಧಿಕಾರಿಗಳು ವಾಹನಗಳನ್ನು ಪರಿಶೀಲಿಸುವ ವೇಳೆ ಮೂರು ಅಪ್ರಾಪ್ತ ವಯಸ್ಸಿನ ಬಾಲಕರು ತಮ್ಮ ದ್ವಿ ಚಕ್ರ ವಾಹನಗಳನ್ನು ಚಲಾಯಿಸುತ್ತ ಬರುತ್ತಿರುವುದನ್ನು ಸಂಚಾರಿ ಪೊಲೀಸರು ತಡೆದು ತಪಾಸಣೆ ನಡೆಸಿದಾಗ, ಅವರು ಅಪ್ರಾಪ್ತ ವಯಸ್ಸಿನವರು ಎನ್ನುವುದು ಖಚಿತ ಪಡೆಸಿಕೊಂಡು, ಮೂವರು ಬಾಲಕರ ಪೋಷಕರ ವಿರುದ್ಧ ಅಪ್ರಾಪ್ತ ವಯಸ್ಸಿನ ಬಾಲಕರಿಗೆ ವಾಹನ ಚಲಾಯಿಸಲು ನೀಡಿದ್ದರ ಕುರಿತು ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ 3 ಪ್ರತ್ಯೇಕ ಪ್ರಕರಣಗಳು ದಾಖಲಿಸಿದ್ದರು.

ಇದನ್ನೂ ಓದಿ:

ಈ ಮೂರು ಪ್ರಕರಣಗಳಲ್ಲಿ ನಗರದ 4 ನೇ ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪಣ ಸಲ್ಲಿಸಿದ್ದು, ಈ ನ್ಯಾಯಾಲಯ ಅಪ್ರಾಪ್ತ ವಯಸ್ಸಿನ ಬಾಲಕರುಗಳ ಪೋಷಕರುಗಳಿಗೆ ತಲಾ 25,000 ರಂತೆ ದಂಡ ಹಾಗೂ ಒಂದು ವರ್ಷದ ವರೆಗೆ ವಾಹನಗಳ ನೋಂದಣಿ ರದ್ದತಿ ಹಾಗೂ ಅಪ್ರಾಪ್ತ ವಯಸ್ಸಿನ 3 ಬಾಲಕರುಗಳಿಗೆ ಅವರು 25 ವರ್ಷ ವಯಸ್ಸಿನವರು ಆಗುವವರೆಗೂ ವಾಹನ ಪರವಾನಿಗೆ ಅಥವಾ ಕಲಿಕೆಯ ಪರವಾನಿಗೆ ನೀಡಬಾರದು ಎಂದು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಆದ್ದರಿಂದ ಪಾಲಕರು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ನೀಡಬಾರದ ಎಂದು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !