May 9, 2026
Saturday, May 9, 2026
spot_img

ವಿಶ್ವದಲ್ಲೀಗ ಹ್ಯಾಂಟಾ ವೈರಸ್ ಭೀತಿ: ಶ್ವಾಸಕೋಶದ ಮೇಲೆ ನೇರ ದಾಳಿ ಮಾಡುವ ಇದರ ಲಕ್ಷಣಗಳೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಂವಿ ಹೊಂಡಿಯಸ್ ಪ್ರವಾಸಿ ಹಡಗಿಗೆ ಸಂಬಂಧಿಸಿದ ಹ್ಯಾಂಟಾ ವೈರಸ್ ಹರಡುವಿಕೆಯ ಸುದ್ದಿ ಚರ್ಚೆಯಲ್ಲಿರುವಾಗಲೇ, ಭವಿಷ್ಯದ ಹ್ಯಾಂಟಾ ವೈರಸ್ ಸಾಂಕ್ರಾಮಿಕದ ಬಗ್ಗೆ ಭವಿಷ್ಯ ನುಡಿದ ಕೆಲವು ವರ್ಷಗಳ ಹಿಂದಿನ ಸಾಮಾಜಿಕ ಮಾಧ್ಯಮದ ಪೋಸ್ಟ್ ಮತ್ತೆ ಇದೀಗ ಮುನ್ನೆಲೆಗೆ ಬಂದಿದೆ.

ಇದು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಭಯ ಮತ್ತು ಊಹಾಪೋಹಗಳಿಗೆ ಕಾರಣವಾಗಿದ್ದು, ಇದು ಮೂಲತಃ 2022ರಲ್ಲಿ ಹಾಕಲಾಗಿದ್ದ ಈ ಟ್ವೀಟ್ ಈಗಿನ ಜಾಗತಿಕ ಕಳವಳದ ನಡುವೆ ವೈರಲ್ ಆಗಿದ್ದು, ಈ ಅಪರೂಪದ ವೈರಲ್ ಕಾಯಿಲೆಯ ಬಗ್ಗೆ ತಪ್ಪು ಮಾಹಿತಿಗಳು ಹರಡಲು ಕಾರಣವಾಗಿದೆ.

ಹಾಗಾದರೆ ಈ ಹ್ಯಾಂಟಾ ವೈರಸ್ ಎಂದರೇನು? ಅದು ಹೇಗೆ ಹಡುತ್ತದೆ, ಅದಕ್ಕೆ ಪರಿಹಾರವೇನು?

ಹ್ಯಾಂಟಾ ವೈರಸ್ ಮುಖ್ಯವಾಗಿ ಇಲಿ ಮತ್ತು ಹೆಗ್ಗಣಗಳ ಮೂಲಕ ಹರಡುವ ಒಂದು ಗಂಭೀರ ಕಾಯಿಲೆಯಾಗಿದೆ. ಇದು ಇಲಿ ಅಥವಾ ಹೆಗ್ಗಣಗಳ ಮೂತ್ರ, ಲಾಲಾರಸ ಅಥವಾ ಮಲದ ಸಂಪರ್ಕದಿಂದ ಹರಡುವ ವೈರಸ್. ಇದು ಮನುಷ್ಯರಲ್ಲಿ ಎರಡು ರೀತಿಯ ಗಂಭೀರ ಸಮಸ್ಯೆಗಳನ್ನು ತರಬಹುದು. ಮೊದಲನೆಯದು HPS ಇದು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಇನ್ನೊಂದು HFRS ಇದು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ.

ಈ ಸೋಂಕು ತಗುಲಿದ 1 ರಿಂದ 8 ವಾರಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಮೊದಲು ಜ್ವರ, ತೀವ್ರ ಸ್ನಾಯು ನೋವು, ಸುಸ್ತು, ತಲೆನೋವು ಮತ್ತು ವಾಂತಿ ಕಾಣಿಸಿಕೊಳ್ಳುತ್ತದೆ. ಬಳಿಕ ಉಸಿರಾಟದ ತೊಂದರೆ, ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುವುದು ಮತ್ತು ರಕ್ತದೊತ್ತಡ ಕಡಿಮೆಯಾಗುವುದು ಇಂತಹ ಗಂಭೀರ ಲಕ್ಷಣಗಳು ಕಾಣಿಕೊಳ್ಳುತ್ತದೆ.

ಇಲಿಗಳ ತ್ಯಾಜ್ಯದ ವೈರಸ್ ಕಣಗಳು ಗಾಳಿಯಲ್ಲಿ ಸೇರಿದಾಗ ಅದನ್ನು ಉಸಿರಾಡುವುದರಿಂದ ರೋಗ ಹರಡುತ್ತದೆ ಹಾಗೂ ಸೋಂಕಿತ ಇಲಿಗಳು ಕಚ್ಚಿದಾಗ ಅಥವಾ ಅವುಗಳ ತ್ಯಾಜ್ಯವನ್ನು ಮುಟ್ಟಿದ ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಿಕೊಂಡಾಗ ಈ ವೈರಸ್‌ ಹರಡುತ್ತದೆ. ಇದು ಸಾಮಾನ್ಯವಾಗಿ ಒಬ್ಬ ಮನುಷ್ಯನಿಂದ ಇನ್ನೊಬ್ಬರಿಗೆ ಹರಡುವುದಿಲ್ಲ.

ಹ್ಯಾಂಟಾ ವೈರಸ್‌ಗೆ ಯಾವುದೇ ನಿರ್ದಿಷ್ಟ ಲಸಿಕೆ ಅಥವಾ ಆಂಟಿವೈರಲ್ ಔಷಧಗಳಿಲ್ಲ. ಆದರೆ ರೋಗಿಯನ್ನು ಕೂಡಲೇ ಐಸಿಯು ದಾಖಲಿಸಿ ಆಮ್ಲಜನಕದ ನೆರವು ನೀಡಬೇಕಾಗುತ್ತದೆ. ಬಳಿಕ ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಆರಂಭಿಸಿದರೆ ಗುಣಮುಖರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮನೆ ಮತ್ತು ಸುತ್ತಮುತ್ತ ಇಲಿಗಳು ಬರದಂತೆ ನೋಡಿಕೊಳ್ಳುವುದು, ಇಲಿಗಳ ತ್ಯಾಜ್ಯವಿರುವ ಜಾಗವನ್ನು ಸ್ವಚ್ಛಗೊಳಿಸುವಾಗ ಮಾಸ್ಕ್ ಮತ್ತು ಗ್ಲೌಸ್ ಧರಿಸುವುದು ಮುಖ್ಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !