May 9, 2026
Saturday, May 9, 2026
spot_img

ಬಿಎಸ್‌ವೈ ಅಭಿಮಾನೋತ್ಸವ | ಉಪ್ಪಿಟ್ಟು, ಕೇಸರಿಬಾತ್… ಭರ್ಜರಿ ಊಟೋಪಚಾರ: ಅಭಿಮಾನಿಗಳೇ ದೇವರು ಅನ್ನೋದು ಸಾಬಿತಾಗೋಯ್ತು

ಹೊಸದಿಗಂತ ವರದಿ ಚಿತ್ರದುರ್ಗ:

ರೈತ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ಜೀವನ 50 ವರ್ಷ ಪೂರೈಸಿರುವ ಅಂಗವಾಗಿ ನಗರದ ಹೊರವಲಯದ ಮದಾರ ಚೆನ್ನಯ್ಯ ಗುರುಪೀಠದ ಬಳಿಯ ಮೈದಾನದಲ್ಲಿ ಶನಿವಾರ ಬಿಎಸ್‌ವೈ ಅಭಿಮಾನೋತ್ಸವ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಸಚಿವರು, ನಾಡಿನ ಅನೇಕ ಮಠಾಧೀಶರು ಆಗಮಿಸಿದ್ದರು.

ಇದಲ್ಲದೇ ನಾಡಿನ ಮೂಲೆ ಮೂಲೆಗಳಿಂದ ಸಾಗರೋಪಾದಿಯಲ್ಲಿ ಅಭಿಮಾನಿಗಳ ದಂಡು ಚಿತ್ರದುರ್ಗಕ್ಕೆ ಹರಿದುಬಂದಿತ್ತು. ಎತ್ತ ನೋಡಿದರೂ ಜನವೋ ಜನ. ನಗರ ಸೇರಿದಂತೆ ನಗರದ ಹೊರವಲಯದ ಹೆದ್ದಾರಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ನಗರದ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ಸುಮಾರು 40 ಕಿಮೀ ವ್ಯಾಪ್ತಿಯಲ್ಲಿ ಸಂಚಾರಿ ದಟ್ಟಣೆ ಉಂಟಾಗಿತ್ತು. ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ಸಾಕು ಸಾಕಾಗಿ ಹೋದರು.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಪ್ರತಿ ಕ್ಷೇತ್ರಗಳಿಂದ ಸಾವಿರ ಸಾವಿರ ಸಂಖ್ಯೆಯ ಅಭಿಮಾನಿಗಳು ಕಾರ್ಯಕ್ರಮಕ್ಕೆ ನಾಡಿನ ವಿವಿಧಡೆಗಳಿಂದ ಜನಸಾಗರವೇ ಹರಿದುಬಂದಿತ್ತು. ಶನಿವಾರ ಮುಂಜಾನೆಯಿಂದಲೇ ಅಭಿಮಾನಿಗಳು ಕಾರ್ಯಕ್ರಮ ನಡೆಯುವ ಮೈದಾನಕ್ಕೆ ದಾಂಗುಡಿ ಇಟ್ಟಿದ್ದರು. ಇವರ ನಿರ್ವಹಣೆಗೆ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ನಾಡಿನ ವಿವಿಧ ಜಿಲ್ಲೆಗಳಿಂದ ಬಂದ ಅಭಿಮಾನಿಗಳಿಗೆ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಅನೇಕ ಪ್ರಬಂಧಕರು ಸ್ವಯಂ ಪ್ರೇರಿತರಾಗಿ ಅಭಿಮಾನಿಗಳಿಗೆ ಅಗತ್ಯ ಸೇವೆ ಒದಗಿಸಿದರು.

ಇದನ್ನೂ ಓದಿ:

ಊಟದ ನಿರ್ವಹಣೆಗೆ ಕಾರ್ಯಕ್ರಮ ವೇದಿಕೆಯ ಒಂದೆರಡು ಕಡೆ ವ್ಯವಸ್ಥೆ ಮಾಡಲಾಗಿತ್ತು. ಊಟ ತಯಾರಿಸಲು 5-6 ಕಡೆ ದೊಡ್ಡ ಶೆಡ್‌ಗಳನ್ನು ನಿರ್ಮಿಸಲಾಗಿತ್ತು. ಪ್ರತಿಯೊಂದು ಕಡೆ ನೂರಾರು ಕೌಂಟರ್‌ಗಳನ್ನು ತೆರೆದು ಜನರಿಗೆ ಊಟ, ತಿಂಡಿ ನೀಡಲಾಯಿತು. ಬೆಳಿಗ್ಗೆ ತಿಂಡಿಗೆ ಉಪ್ಪಿಟ್ಟು, ಕೇಸರಿಬಾತ್, ಇಡ್ಲಿ, ವಡೆ, ಸಾಂಬಾರ್ ನೀಡಲಾಯಿತು. ಬಳಿಕ 11 ಗಂಟೆಯ ನಂತರ ಟೊಮೋಟೋ ಬಾತ್, ಪಲಾವ್, ಮೊಸರನ್ನ, ಮೈಸೂರುಪಾಕ್ ನೀಡಲಾಯಿತು. ಅಭಿಮಾನಿಗಳು ಹೊಟ್ಟೆತುಂಬ ಊಟ ಮಾಡಿ ಸಂತೃಪ್ತರಾದರು.

ಇದಲ್ಲದೇ ಕಾರ್ಯಕ್ರಮದ ಪೆಂಡಾಲ್‌ನಲ್ಲಿದ್ದ ಜನರಿಗೆ ತಿನ್ನಲು ಬ್ರೆಡ್, ದಿಲ್‌ಕುಷ್, ಬಾಳೆಹಣ್ಣು, ಕುಡಿಯಲು ನೀರಿನ ಬಾಟಲ್‌ಗಳನ್ನು ಕುಳಿತಲ್ಲಿಗೇ ವಿತರಣೆ ಮಾಡಲಾಯಿತು. ಸಾಗರೋಪಾದಿಯಲ್ಲಿ ಅಭಿಮಾನಿಗಳು ನೆರೆದಿದ್ದ ಪರಿಣಾಮ, ಅವರಿಗೆ ನೀಡಲು ತಂದಿದ್ದ ಪರಿಕರಗಳನ್ನು ಪೆಂಡಾಲ್‌ನಲ್ಲಿ ಅಲ್ಲಲ್ಲಿ ರಾಶಿ ಹಾಕಲಾಗಿತ್ತು. ನೆರೆದಿದ್ದ ಜನರಿಗೆ ಅಲ್ಲಲ್ಲಿ ಕುಡಿಯುವ ನೀರು, ಮಜ್ಜಿಗೆ ಪ್ಯಾಕೇಟ್‌ಗಳನ್ನು ವಿತರಿಸಲಾಗುತ್ತಿತ್ತು. ಬಿಸಿನಿನ ಝಳ ತಪ್ಪಿಸಲು ಅಲ್ಲಲ್ಲಿ ಏರ್ ಕೂಲರ್‌ಗಳು, ಬೃಹತ್ ಗಾತ್ರದ ಫ್ಯಾನ್‌ಗಳನ್ನು ಅಳವಡಿಸಲಾಗಿತ್ತು.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸುಮಾರು 3000 ಪ್ರಬಂಧಕರು ಕಳೆದ 15 ದಿನಗಳಿಂದ ವಿವಿಧ ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೇ ಹಾಲಿ ಮತ್ತು ಮಾಜಿ ಶಾಸಕರು ವಿವಿಧ ಜವಾಬ್ದಾರಿಗಳನ್ನು ಹಂಚಿಕೊಂಡು ನಿಭಾಯಿಸಿದರು. ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳು ವೇದಿಕೆಯಲ್ಲಿದ್ದ ನಾಯಕರಿಗೆ ಜೈಕಾರ ಹಾಕುತ್ತಿದ್ದರು. ಕೇಕೆ, ಸಿಳ್ಳೆ ಹಾಕಿ ಸಂಭ್ರಮಿಸಿದರು. ಒಂದು ಹಂತದಲ್ಲಿ ತುದಿಗಾಲಲ್ಲಿ ನಿಂತು ಕಾರ್ಯಕ್ರಮ ವೀಕ್ಷಿಸಿದರು. ಅಮಿತ್ ಶಾ ಭಾಷಣದ ವೇಳೆ ಮೋದಿ, ಮೋದಿ ಎಂದು ಕೂಗುತ್ತಾ ಅಭಿಮಾನ ವ್ಯಕ್ತಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !