May 9, 2026
Saturday, May 9, 2026
spot_img

ಯಶಸ್ವಿಯಾಗಿ ನಡೆದ ಕಾಮೆಡ್ ಕೆ ಪರೀಕ್ಷೆ: ಶೇ.85ರಷ್ಟು ಹಾಜರಾತಿ

ಹೊಸದಿಗಂತ ವರದಿ ಬೆಂಗಳೂರು:

ಕಾಮೆಡ್ ಕೆ ಪರೀಕ್ಷೆಯು ಕರ್ನಾಟಕದ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಪ್ರಮುಖ ಪ್ರವೇಶ ಪರೀಕ್ಷೆಯಾಗಿದ್ದು, ಶನಿವಾರ ಈ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು, ಎರಡೂ ಪರೀಕ್ಷೆಗಳನ್ನು ಪ್ರತ್ಯೇಕ ಮೆರಿಟ್ ಪಟ್ಟಿಗಳೊಂದಿಗೆ ಒಂದೇ ಪರೀಕ್ಷೆಯ ರೂಪದಲ್ಲಿ ನಡೆಸಲಾಗಿದೆ. ಶೇ.85ರಷ್ಟು ಹಾಜರಾತಿ ದಾಖಲಾಗಿದೆ.

ಕರ್ನಾಟಕದ 150 ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಸುಮಾರು 20 ಸಾವಿರ ಸೀಟುಗಳಿಗೆ ಪ್ರವೇಶ ಪಡೆಯಲು ನಡೆಸಲಾಗುವ ಕಾಮೆಡ್ ಕೆ ಯುಜಿಇಟಿ – 2026 ಹಾಗೂ ಯುನಿ ಗೇಜ್- 2026 ಪ್ರವೇಶ ಪರೀಕ್ಷೆ, ಎರಡು ಅವಧಿಗಳಲ್ಲಿ ನಡೆದ ಈ ಪರೀಕ್ಷೆಯಲ್ಲಿ ದೇಶದ ವಿವಿಧ ಭಾಗಗಳಿಂದ ಅಭ್ಯರ್ಥಿಗಳು ಭಾಗವಹಿಸಿದ್ದರು.

ಒಟ್ಟು ಎರಡು ಅವಧಿಗಳಲ್ಲಿ ನಡೆದ ಈ ಆನ್ ಲೈನ್ ಪರೀಕ್ಷೆಯು ಅತ್ಯಂತ ವ್ಯವಸ್ಥಿತವಾಗಿ ನಡೆದಿದ್ದು, ಮೊದಲ ಅಧಿವೇಶನದಲ್ಲಿ ದೇಶಾದ್ಯಂತ ಶೇ.84.47 ಹಾಜರಾತಿ ಮತ್ತು ಎರಡನೇ ಅಧಿವೇಶನದಲ್ಲಿ ದೇಶಾದ್ಯಂತ ಶೇ. 85.20 ಹಾಜರಾತಿ ದಾಖಲಾಗಿದೆ. ಉಳಿದಂತೆ ಮೊದಲ ಅಧಿವೇಶನದಲ್ಲಿ ಕರ್ನಾಟಕದಲ್ಲಿ ಶೇ.87.72, ಬೆಂಗಳೂರಿನಲ್ಲಿ ಶೇ.89.71, ಎರಡನೇ ಅಧಿವೇಶನದಲ್ಲಿ ಕರ್ನಾಟಕದಲ್ಲಿ ಶೇ.88.27 ಮತ್ತು ಬೆಂಗಳೂರಿನಲ್ಲಿ ಶೇ.89.46 ಹಾಜರಾತಿ ದಾಖಲಾಗಿದೆ.

ಇದನ್ನೂ ಓದಿ:

ಕಾಮೆಡ್ ಕೆ ಇಂಜಿನಿಯರಿಂಗ್ ಪರೀಕ್ಷೆಗೆ ದೇಶಾದ್ಯಂತ ಒಟ್ಟು 1,30,620 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಅವರಲ್ಲಿ 1,10,787 ಮಂದಿ ಪರೀಕ್ಷೆಗೆ ಹಾಜರಾದರು. ಕರ್ನಾಟಕದಲ್ಲಿ 40,547 ಅಭ್ಯರ್ಥಿಗಳ ಪೈಕಿ 35.678 ಮಂದಿ ಪರೀಕ್ಷೆ ಬರೆದರೆ, ಬೆಂಗಳೂರಿನಲ್ಲಿ 19,036 ಅಭ್ಯರ್ಥಿಗಳಲ್ಲಿ 17,054 ಮಂದಿ ಪರೀಕ್ಷೆಗೆ ಹಾಜರಾದರು.

ಇನ್ನೊಂದೆಡೆ, ಗುಜರಾತ್‌ನ ಒಂದು ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಯೊಬ್ಬರು ಮೊಬೈಲ್ ಮತ್ತು ಚಾಟ್ ಜಿಪಿಟಿ ಉಪಯೋಗಿಸುತ್ತಿದ್ದ ಪ್ರಕರಣ ಪತ್ತೆಯಾಗಿದೆ. ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಆ ಅಭ್ಯರ್ಥಿಯನ್ನು ಪರೀಕ್ಷೆಯಿಂದ ಡಿಬಾರ್ ಮಾಡಲಾಗಿದೆ ಎಂದು ಕಾಮೆಡ್ ಕೆ ಕಾರ್ಯದರ್ಶಿ ಡಾ. ಎಸ್. ಕುಮಾರ್ ತಿಳಿಸಿದ್ದಾರೆ.

ಪರೀಕ್ಷೆಯ ತಾತ್ಕಾಲಿಕ ಉತ್ತರ ಕೀಲಿ ಮೇ 13ರಂದು ಪ್ರಕಟವಾಗಲಿದ್ದು, ಅಂತಿಮ ಉತ್ತರ ಕೀಲಿಯನ್ನು ಮೇ 20ರಂದು ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳ ರ್ಯಾಂಕ್ ಕಾರ್ಡ್‌ಗಳು ಮೇ 26ರಂದು ಲಭ್ಯವಾಗಲಿವೆ. ಪರೀಕ್ಷೆಯನ್ನು ಭಾರತದೆಲ್ಲೆಡೆ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯೋಜಿಸಲಾಗಿತ್ತು. ಒಟ್ಟು 171 ನಗರಗಳಲ್ಲಿ, ಅದರಲ್ಲೂ ಕರ್ನಾಟಕದ 25 ನಗರಗಳಲ್ಲಿ ಪರೀಕ್ಷೆ ನಡೆಯಿತು. ದೇಶಾದ್ಯಂತ 303 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಕರ್ನಾಟಕದಲ್ಲಿ 109 ಹಾಗೂ ಬೆಂಗಳೂರಿನಲ್ಲಿ 46 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !