ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದಲ್ಲಿ ನಡೆದ ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮ ರಾಜಕೀಯವಾಗಿ ಗಮನ ಸೆಳೆದಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವವನ್ನು ಮುಕ್ತಕಂಠದಿಂದ ಕೊಂಡಾಡಿದರು.
ದಕ್ಷಿಣ ಭಾರತದಲ್ಲಿ ಬಿಜೆಪಿ ಬೇರು ಬಲವಾಗಲು ಯಡಿಯೂರಪ್ಪ ಅವರ ಪರಿಶ್ರಮವೇ ಪ್ರಮುಖ ಕಾರಣ ಎಂದು ಅವರು ಹೇಳಿದರು.
ಯಡಿಯೂರಪ್ಪ ಅವರು ಹಲವು ದಶಕಗಳಿಂದ ಜನಸೇವೆಯನ್ನೇ ಧ್ಯೇಯವನ್ನಾಗಿ ಮಾಡಿಕೊಂಡು ರಾಜಕೀಯ ಪಯಣ ಕಟ್ಟಿಕೊಂಡವರು. ರೈತರ ಹಿತಾಸಕ್ತಿ, ರಾಜ್ಯದ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಗೆ ಅವರು ಸಲ್ಲಿಸಿದ ಸೇವೆ ವಿಶಿಷ್ಟವಾಗಿದೆ ಎಂದು ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ:
ಸಾಮಾನ್ಯ ಹಿನ್ನೆಲೆಯಿಂದ ರಾಜಕೀಯಕ್ಕೆ ಬಂದ ಯಡಿಯೂರಪ್ಪ, ಹೋರಾಟಗಳ ಮೂಲಕ ಜನಮನ ಗೆದ್ದು ನಾಲ್ಕು ಬಾರಿ ರಾಜ್ಯದ ಆಡಳಿತದ ಹೊಣೆ ಹೊತ್ತರು. ತಮ್ಮದೇ ದಾರಿಯಲ್ಲಿ ಸಾಗುವುದಷ್ಟೇ ಅಲ್ಲ, ಹೊಸ ನಾಯಕತ್ವ ಬೆಳೆಸುವ ಗುಣವೂ ಅವರಲ್ಲಿದೆ ಎಂದು ಶಾ ಹೇಳಿದರು.
ಕರ್ನಾಟಕದ ಅಭಿವೃದ್ಧಿಯಲ್ಲಿ ಯಡಿಯೂರಪ್ಪ ಅವರ ಪಾತ್ರ ದೊಡ್ಡದು. ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ, ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಮತ್ತು ಎಲ್ಲಾ ವರ್ಗಗಳ ಸಮಗ್ರ ಪ್ರಗತಿಗೆ ಅವರು ನೀಡಿದ ಕೊಡುಗೆ ಗಮನಾರ್ಹವಾಗಿದೆ. ಇಂತಹ ಜನನಾಯಕನಿಗೆ ರಾಜ್ಯದ ಜನರು ನೀಡುತ್ತಿರುವ ಗೌರವ ಸಾರ್ಥಕ ಎಂದು ಅಮಿತ್ ಶಾ ಅಭಿಪ್ರಾಯಪಟ್ಟರು.



