ಹೊಸದಿಗಂತ ವರದಿ ಉತ್ತರಕನ್ನಡ:
ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮುಗುಚಿದ ಪರಿಣಾಮ, ಮೀನುಗಾರರೊಬ್ಬರು ಮೃತಪಟ್ಟ ಘಟನೆ ಶನಿವಾರ ಅಪಪ್ಸರಕೊಂಡ ಕಡಲ ತೀರದಲ್ಲಿ ಸಂಭವಿಸಿದೆ.
ಮೃತರನ್ನು ಹೊನ್ನಾವರ ತಾಲ್ಲೂಕಿನ ಅಪಪ್ಸರಕೊಂಡ ನಿವಾಸಿ ಚಂದ್ರಕಾಂತ ಲಕ್ಷ್ಮಣ ಖಾರ್ವಿ (38 ವರ್ಷ) ಎಂದು ಗುರುತಿಸಲಾಗಿದೆ.
ಶನಿವಾರ ಬೆಳಿಗ್ಗೆ ಚಂದ್ರಕಾಂತ ಮಾಲೀಕ ಕೇಶವ ರಾಮ ಖಾರ್ವಿ ಅವರ ‘ಶ್ರೀ ರಾಮ’ ಹೆಸರಿನ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಮಧ್ಯಾಹ್ನ 1:30ರ ಸುಮಾರಿಗೆ ದಡದಿಂದ ಸುಮಾರು 1.5 ಕಿ.ಮೀ ದೂರದಲ್ಲಿ ಮೀನುಗಾರಿಕೆ ಮುಗಿಸಿ ಹಿಂತಿರುಗುತ್ತಿದ್ದಾಗ, ಹಠಾತ್ ಬಂದ ಬೃಹತ್ ಅಲೆಗಳು ದೋಣಿಗೆ ಅಪ್ಪಳಿಸಿವೆ. ಇದರಿಂದಾಗಿ ದೋಣಿ ಸಮುದ್ರದಲ್ಲಿ ಮಗುಚಿದ್ದು, ದೋಣಿಯಲ್ಲಿದ್ದ ಇಬ್ಬರೂ ನೀರಿಗೆ ಬಿದ್ದಿದ್ದಾರೆ.
ದೋಣಿ ಚಾಲಕ ಕೇಶವ ಅವರು ದೋಣಿಯನ್ನು ಹಿಡಿದುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಚಂದ್ರಕಾಂತ ಸಮುದ್ರದ ನೀರು ಕುಡಿದು ಅಸ್ವಸ್ಥರಾಗಿದ್ದರು. ಕೇಶವ ಹಗ್ಗದ ಸಹಾಯದಿಂದ ಚಂದ್ರಕಾಂತ ಅವರನ್ನು ದಡಕ್ಕೆ ಎಳೆತಂದು ನಂತರ ಆಟೋ ಮೂಲಕ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.
ಚಂದ್ರಕಾಂತ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲು ವೈದ್ಯರು ಸೂಚಿಸಿದ್ದು ಅಂಬ್ಯುಲೆನ್ಸ್ ಮೂಲಕ ಮಂಗಳೂರಿಗೆ ಹೋಗುವಾಗ ಹೊನ್ನಾವರ ಸೇತುವೆಯ ಸಮೀಪ ಚಂದ್ರಕಾಂತ ಮೃತಪಟ್ಟಿದ್ದಾರೆ.
ಈ ಕುರಿತು ಮೃತರ ಸಹೋದರ ಮಂಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ಚಂದ್ರಕಾಂತ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.



