ಹೊಸ ದಿಗಂತ ಡಿಜಿಟಲ್ ಡೆಸ್ಕ್ :
ಸಚಿವ ಡಿ. ಸುಧಾಕರ್ ಅವರ ಸ್ಮರಣಾರ್ಥ ನೀರಾವರಿ ಯೋಜನೆಗೆ ಅವರ ಹೆಸರಿಡಲು ಚಿಂತಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಡಿ. ಸುಧಾಕರ್ ಅವರ ನಿಧನ ಇಂದು ನಮ್ಮ ಪಾಲಿಗೆ ಬಹಳ ದುಃಖದ ದಿನ. ನನ್ನ ಆಪ್ತಮಿತ್ರರಾಗಿದ್ದರು. ಕಳೆದ ಒಂದು ತಿಂಗಳ ಹಿಂದೆ ಮಂಡಿ ನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿದ್ದರು. ಕೆಲ ದಿನಗಳ ಕಾಲ ಅವರಿಗೆ ಪ್ರಜ್ಞೆ ಮರಳಿತ್ತು. ಮತ್ತೆ ಗುಣಮುಖರಾಗಿ ಮರಳುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಅವರ ಪಾರ್ಥಿವ ಶರೀರವನ್ನು ಹಿರಿಯೂರಿಗೆ ತೆಗೆದುಕೊಂಡು ಹೋಗಲಾಗುತ್ತಿದ್ದು, ನಾಳೆ ಅವರ ಅಂತಿಮ ಸಂಸ್ಕಾರ ಕಾರ್ಯದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.
ಸಚಿವ ಡಿ. ಸುಧಾಕರ್ ಅವರಿಗೆ ಭದ್ರಾ ಯೋಜನೆ ಪೂರ್ಣಗೊಳಿಸಿ ಚಾಲನೆ ನೀಡಬೇಕು ಎಂದು ಬಹಳ ಆಸೆ ಇಟ್ಟುಕೊಂಡಿದ್ದರು. ಈ ಯೋಜನೆಗಾಗಿ ಸಾಕಷ್ಟು ಹೋರಾಟ ಮಾಡಿದ್ದರು. ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಿಕೊಡುತ್ತಿದ್ದರು ಎಂದು ಹೇಳಿದರು.



