ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಗದ ಹಿನ್ನೆಲೆ ದೇಶದಲ್ಲಿ ತೈಲ ಅಭಾವ ಉಂಟಾಗಲಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದ್ದು, ಈ ಬೆನ್ನಲ್ಲೇ ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಸ್ಪಷ್ಟನೆ ನೀಡಿದೆ.
ದೇಶದಲ್ಲಿ ಪ್ರಸುತ್ತ ಸಾಕಷ್ಟು ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ದಾಸ್ತಾನುಗಳಿದ್ದು, ಯಾವುದೇ ರೀತಿಯಲ್ಲಿ ಕೊರತೆ ಉಂಟಾಗುವುದಿಲ್ಲ ಎಂದು ತಿಳಿಸಿದೆ.
ಈ ಕುರಿತು ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು, ದೇಶದಲ್ಲಿ ಅಗತ್ಯವಿರುವಷ್ಟು ಇಂಧನ ಸಂಗ್ರಹವಿದೆ. ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಸರಳವಾಗಿ ಜನರಿಗೆ ಇಂಧನ ತಲುಪುವ ಸಲುವಾಗಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇದರಿಂದ ಸಾಮಾನ್ಯ ಗ್ರಾಹಕರಿಗೆ ಇಂಧನ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಮನೆಗಳಿಗೆ ವಿತರಿಸಲಾದ ಎಲ್‌ಪಿಜಿ ಸಿಲಿಂಡರ್‌ಗಳ ಕುರಿತು ಮಾಹಿತಿ ನೀಡಿದ ಅವರು, ದೇಶದಲ್ಲಿ ಕಳೆದ ಮೂರು ದಿನಗಳಲ್ಲಿ 1 ಕೋಟಿ 14 ಲಕ್ಷ ಗ್ಯಾಸ್ ಬುಕಿಂಗ್‌ಗಳಾಗಿದೆ. ಅದೇ ರೀತಿ 1 ಕೋಟಿ 26 ಲಕ್ಷ ಎಲ್‌ಪಿಜಿ ಸಿಲಿಂಡರ್‌ಗಳನ್ನು ಗ್ರಾಹಕರಿಗೆ ತಲುಪಿಸಲಾಗಿದೆ. ಇನ್ನು 17 ಸಾವಿರ ಟನ್ ಗಳಷ್ಟು ಕಮರ್ಷಿಯಲ್ ಎಲ್‌ಪಿಜಿ ಮಾರಾಟ ಮಾಡಲಾಗಿದ್ದು, ಆಟೋ ಎಲ್‌ಪಿಜಿ ಮಾರಾಟವು 762 ಟನ್‌ಗಳನ್ನು ಮೀರಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪೆಟ್ರೋಲಿಯಂ ಉತ್ಪನ್ನಗಳನ್ನು ಎಚ್ಚರಿಕೆಯಿಂದ ಬಳಸುವಂತೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಗ್ರಾಹಕರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿತ್ತು.



