ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಚಿನ್ನ ಮತ್ತು ಇಂಧನ ಬಳಕೆಯನ್ನು ಮಿತಿಗೊಳಿಸುವಂತೆ ನೀಡಿದ ಮನವಿ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ನಾಯಕರು ಈ ಹೇಳಿಕೆಯನ್ನು ಟೀಕಿಸಿದ ಬೆನ್ನಲ್ಲೇ ಬಿಜೆಪಿ ನಾಯಕರು ಪ್ರತಿದಾಳಿ ಆರಂಭಿಸಿದ್ದು, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಆರ್. ಅಶೋಕ್, ಕಾಂಗ್ರೆಸ್‌ನ ನೆನಪು ಶಕ್ತಿ ವಿಚಿತ್ರವಾಗಿ ಕೆಲಸ ಮಾಡುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. 1967ರಲ್ಲಿ ಇಂದಿರಾ ಗಾಂಧಿ ದೇಶದ ಜನರಿಗೆ ಚಿನ್ನ ಖರೀದಿಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದರು. ಅದನ್ನು ಆಗ ‘ರಾಷ್ಟ್ರೀಯ ಶಿಸ್ತು’ ಎಂದು ಕಾಂಗ್ರೆಸ್ ಕೊಂಡಾಡಿತ್ತು ಎಂದು ಅವರು ನೆನಪಿಸಿದ್ದಾರೆ.
ಇದನ್ನೂ ಓದಿ:
ಇದೇ ರೀತಿ 2013ರಲ್ಲಿ ಆಗಿನ ಹಣಕಾಸು ಸಚಿವ ಪಿ. ಚಿದಂಬರಂ ಕೂಡ ಚಿನ್ನ ಖರೀದಿ ಕಡಿಮೆ ಮಾಡುವಂತೆ ಮನವಿ ಮಾಡಿದ್ದರು. ಆಗ ಅದನ್ನು ‘ಆರ್ಥಿಕ ಜವಾಬ್ದಾರಿ’ ಎಂದು ಬಣ್ಣಿಸಲಾಗಿತ್ತು ಎಂದು ಅಶೋಕ್ ಹೇಳಿದ್ದಾರೆ.
ಈಗ ಪ್ರಧಾನಿ ಮೋದಿ ದೇಶದ ವಿದೇಶಿ ವಿನಿಮಯ ಉಳಿಸಲು ಹಾಗೂ ರೂಪಾಯಿ ಮೌಲ್ಯ ಬಲಪಡಿಸಲು ಇದೇ ರೀತಿಯ ಕರೆ ನೀಡಿದಾಗ ಕಾಂಗ್ರೆಸ್ ನಾಯಕರು ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ತಮ್ಮದೇ ಪಕ್ಷದ ಹಳೆಯ ನಿಲುವುಗಳನ್ನು ಕಾಂಗ್ರೆಸ್ ಮೊದಲು ನೆನಪಿಸಿಕೊಳ್ಳಬೇಕು ಎಂದು ಅಶೋಕ್ ಕಿಡಿಕಾರಿದ್ದಾರೆ.



