ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದಲ್ಲಿ ದಳಪತಿ ವಿಜಯ್ ಅವರ ಹೊಸ ರಾಜಕೀಯ ಪಯಣ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ್ದು, ಅದರ ಪರಿಣಾಮ ಇದೀಗ ಅವರ ಸಿನಿಮಾಗಳ ಮೇಲೂ ಕಾಣಿಸತೊಡಗಿದೆ.
ಮುಖ್ಯಮಂತ್ರಿ ಪಟ್ಟಕ್ಕೇರಿದ ಬಳಿಕ ವಿಜಯ್ ಅವರ ಜನಪ್ರಿಯತೆ ಮತ್ತಷ್ಟು ಏರಿಕೆಯಾಗಿದ್ದು, ಅವರ ಮುಂದಿನ ಸಿನಿಮಾ ‘ಜನ ನಾಯಗನ್’ ಇದೀಗ ಓಟಿಟಿ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಆರಂಭದಲ್ಲಿ ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಅಮೇಜಾನ್ ಪ್ರೈಮ್ ವಿಡಿಯೋ ಸುಮಾರು 120 ಕೋಟಿ ರೂಪಾಯಿಗೆ ಪಡೆದುಕೊಂಡಿತ್ತು. ಆದರೆ ಸೆನ್ಸಾರ್ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆ ಡೀಲ್‌ನಿಂದ ಸಂಸ್ಥೆ ಹಿಂದೆ ಸರಿದಿತ್ತು ಎನ್ನಲಾಗಿದೆ. ಇದರಿಂದ ಚಿತ್ರತಂಡಕ್ಕೆ ಹಿನ್ನಡೆಯಾದರೂ, ವಿಜಯ್ ಅವರ ರಾಜಕೀಯ ಯಶಸ್ಸಿನ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.
ಇದನ್ನೂ ಓದಿ:
ಈಗ ಹಲವು ದೊಡ್ಡ ಓಟಿಟಿ ಕಂಪನಿಗಳು ‘ಜನ ನಾಯಗನ್’ ಚಿತ್ರದ ಹಕ್ಕುಗಳಿಗಾಗಿ ಪೈಪೋಟಿಗೆ ಇಳಿದಿವೆ. ಮಾರುಕಟ್ಟೆಗೆ ಹೊಸದಾಗಿ ಕಾಲಿಟ್ಟಿರುವ ಪ್ರಮುಖ ಸಂಸ್ಥೆಯೊಂದು, ಹಿಂದಿನ ಒಪ್ಪಂದಕ್ಕಿಂತಲೂ ಹೆಚ್ಚಿನ ಮೊತ್ತದ ಆಫರ್ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. 150 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವ್ಯವಹಾರ ನಡೆಯಬಹುದು ಎನ್ನುವ ಮಾತುಗಳು ಟ್ರೇಡ್ ವಲಯದಲ್ಲಿ ಕೇಳಿಬರುತ್ತಿವೆ.
ನಿರ್ಮಾಪಕ ಕೆ. ವೆಂಕಟ್ ನಾರಾಯಣ್ ಚಿತ್ರವನ್ನು ಇನ್ನೆರಡು ವಾರಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದ್ದಾರೆ. ವಿಜಯ್ ಅವರ ಸಿಎಂ ವರ್ಚಸ್ಸು ಚಿತ್ರದ ಮೌಲ್ಯವನ್ನೇ ಹೆಚ್ಚಿಸಿದೆ ಎಂಬ ಚರ್ಚೆ ಸಿನಿ ವಲಯದಲ್ಲಿ ಜೋರಾಗಿದೆ.



