ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಬೆಲೆಗಳ ನಡುವೆ ಇದೀಗ ಮದ್ಯ ಪ್ರಿಯರಿಗೂ ಮತ್ತೊಂದು ದೊಡ್ಡ ಹೊರೆ ಬಿದ್ದಿದೆ.
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಹೊಸ ಅಬಕಾರಿ ನೀತಿಯಿಂದ ಮದ್ಯದ ದರಗಳು ಮತ್ತೆ ಏರಿಕೆಯಾಗಿದ್ದು, ಬಾರ್ ಮತ್ತು ವೈನ್ ಸ್ಟೋರ್‌ಗಳಲ್ಲಿ ಹೊಸ ದರಗಳು ಅನ್ವಯವಾಗಲು ಆರಂಭವಾಗಿದೆ. ಈ ಬದಲಾವಣೆ ಮದ್ಯ ಖರೀದಿಸುವ ಗ್ರಾಹಕರಿಗೆ ನೇರ ಪರಿಣಾಮ ಬೀರುತ್ತಿದೆ.
ಸರ್ಕಾರ ಈ ಬಾರಿ ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದಲ್ಲಿ ತೆರಿಗೆ ವಿಧಿಸುವ ಹೊಸ ವ್ಯವಸ್ಥೆ ಜಾರಿಗೆ ತಂದಿದೆ. ಇದುವರೆಗೆ ಇದ್ದ ಹಳೆಯ ತೆರಿಗೆ ಪದ್ಧತಿಗೆ ತೆರೆ ಎಳೆದಿರುವ ಅಬಕಾರಿ ಇಲಾಖೆ, ಹೆಚ್ಚು ಆಲ್ಕೋಹಾಲ್ ಇರುವ ಮದ್ಯಕ್ಕೆ ಹೆಚ್ಚಿನ ತೆರಿಗೆ ವಿಧಿಸುವ ನಿರ್ಧಾರ ಕೈಗೊಂಡಿದೆ. ಬ್ರಾಂಡಿ, ವಿಸ್ಕಿ, ರಮ್, ಜಿನ್, ವೋಡ್ಕಾ ಹಾಗೂ ಬಿಯರ್‌ಗಳ ದರಗಳಲ್ಲಿ ಏರಿಕೆ ಕಂಡುಬಂದಿದೆ.
ಇದನ್ನೂ ಓದಿ:
ವಿಶೇಷವಾಗಿ 180 ಮಿಲಿ ಕ್ವಾರ್ಟರ್ ಬಾಟಲ್ ಮತ್ತು ಟೆಟ್ರಾ ಪ್ಯಾಕ್‌ಗಳ ಬೆಲೆ ಶೇ.20ರಿಂದ 30ರವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಕೆಲ ಸಾಮಾನ್ಯ ಬ್ರಾಂಡ್‌ಗಳ ಕ್ವಾರ್ಟರ್ ದರ 105 ರೂಪಾಯಿವರೆಗೆ ತಲುಪಬಹುದು ಎಂದು ಹೇಳಲಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಮದ್ಯದ ದರ ಹಲವು ಬಾರಿ ಏರಿಕೆಯಾಗಿದ್ದರಿಂದ ಮದ್ಯ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ವಿದೇಶಿ ಪ್ರೀಮಿಯಂ ಮದ್ಯ ಬ್ರಾಂಡ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಕಡಿತಗೊಂಡಿರುವುದರಿಂದ ಕೆಲವು ದುಬಾರಿ ಬ್ರಾಂಡ್‌ಗಳ ದರ ಇಳಿಕೆಯಾಗುವ ಸಾಧ್ಯತೆಯೂ ಇದೆ. ಈ ನಿರ್ಧಾರದಿಂದ ಸಾಮಾನ್ಯ ಮದ್ಯದ ದರ ಏರಿಕೆ ಆಗಿ, ಪ್ರೀಮಿಯಂ ಬ್ರಾಂಡ್‌ಗಳಿಗೆ ಲಾಭ ಸಿಗುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.



