October 6, 2026
Tuesday, October 6, 2026
spot_img

ಹಾರ್ಮುಜ್ ನಲ್ಲಿ ಹಡಗಿನ ಮೇಲಿನ ದಾಳಿ ಬಗ್ಗೆ ಭಾರತದ ಖಂಡನೆ: ಸುರಕ್ಷಿತ ನೌಕಾಯಾನಕ್ಕೆ ಒತ್ತಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ವ್ಯಾಪಾರ ಮತ್ತು ಇಂಧನ ಸಾಗಣೆಯ ಪ್ರಮುಖ ಸಮುದ್ರ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಮತ್ತೊಮ್ಮೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಒಮಾನ್ ಕರಾವಳಿ ಸಮೀಪ ಸಾಗುತ್ತಿದ್ದ ಪನಾಮಾ ಧ್ವಜದ ವಾಣಿಜ್ಯ ಹಡಗು ಎಂಟಿ ಆನ್ ಪೀಸ್ ಮೇಲೆ ಮಂಗಳವಾರ ದಾಳಿ ನಡೆದಿದ್ದು, ಹಡಗಿನಲ್ಲಿದ್ದ 19 ಸಿಬ್ಬಂದಿಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 11 ಮಂದಿ ಭಾರತೀಯರು ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಹಡಗಿನಲ್ಲಿ ಒಟ್ಟು 17 ಭಾರತೀಯರು ಸೇರಿದಂತೆ 19 ಸಿಬ್ಬಂದಿ ಇದ್ದರು ಎನ್ನಲಾಗಿದೆ.

ಇಂತಹ ದಾಳಿಗಳಿಗೆ ತಕ್ಷಣವೇ ಅಂತ್ಯ ಹಾಡಬೇಕು

ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ವಾಣಿಜ್ಯ ಹಡಗುಗಳು, ನಾವಿಕರು ಹಾಗೂ ನಾಗರಿಕ ಮೂಲಸೌಕರ್ಯಗಳ ಮೇಲೆ ನಡೆಯುತ್ತಿರುವ ದಾಳಿಗಳು ಗಂಭೀರ ಆತಂಕಕ್ಕೆ ಕಾರಣವಾಗಿವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯ ಹಿತದೃಷ್ಟಿಯಿಂದ ಇಂತಹ ದಾಳಿಗಳಿಗೆ ತಕ್ಷಣವೇ ಅಂತ್ಯ ಹಾಡಬೇಕು ಎಂದು ಭಾರತ ಒತ್ತಾಯಿಸಿದೆ.

ವಾಣಿಜ್ಯ ಸಂಚಾರ ಸಹಜ ಸ್ಥಿತಿಗೆ ಬರಬೇಕು

ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಯಾವುದೇ ಅಡ್ಡಿಯಾಗಬಾರದು. ಜಾಗತಿಕ ವ್ಯಾಪಾರಕ್ಕೆ ಅತ್ಯಂತ ಮಹತ್ವದ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಸಂಚಾರವನ್ನು ಶೀಘ್ರವಾಗಿ ಸಹಜ ಸ್ಥಿತಿಗೆ ತರಬೇಕು ಎಂಬ ಸಂದೇಶವನ್ನೂ ಭಾರತ ನೀಡಿದೆ.

ಘಟನೆಯ ಬಳಿಕ ಒಮಾನ್ ಅಧಿಕಾರಿಗಳು ತಕ್ಷಣ ನೆರವಿಗೆ ಧಾವಿಸಿದ್ದು, ಗಾಯಗೊಂಡ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಗಾಯಾಳುಗಳಿಗೆ ಒಮಾನ್‌ನ ಖಸಬ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಸಂಕಷ್ಟದ ಸಮಯದಲ್ಲಿ ನೆರವು ನೀಡಿದ ಒಮಾನ್ ಅಧಿಕಾರಿಗಳಿಗೆ ಭಾರತ ಕೃತಜ್ಞತೆ ಸಲ್ಲಿಸಿದೆ.

Must Read