October 6, 2026
Tuesday, October 6, 2026
spot_img

25 ವರ್ಷಗಳ ನಿರಂತರ ನಾಯಕತ್ವ! ಮೋದಿ ಪಯಣಕ್ಕೆ ಕೇಂದ್ರ ಸಂಪುಟದ ಅಭಿನಂದನಾ ನಿರ್ಣಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್‌ನಿಂದ ಆರಂಭಿಸಿ ದೇಶದ ಪ್ರಧಾನಮಂತ್ರಿಯವರೆಗೆ ಬರೋಬ್ಬರಿ 25 ವರ್ಷಗಳ ಕಾಲ ನಿರಂತರವಾಗಿ ಸರ್ಕಾರದ ನಾಯಕತ್ವ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರ ಸಚಿವ ಸಂಪುಟ ಅಭಿನಂದಿಸಿದೆ.

‘ರಾಷ್ಟ್ರ ಮೊದಲು, ನಾಗರಿಕ ಮೊದಲು’

ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಮೋದಿ ಅವರ 25 ವರ್ಷಗಳ ಸಾರ್ವಜನಿಕ ನಾಯಕತ್ವವನ್ನು ಸ್ಮರಿಸಿ ವಿಶೇಷ ನಿರ್ಣಯ ಅಂಗೀಕರಿಸಲಾಗಿದೆ. ‘ರಾಷ್ಟ್ರ ಮೊದಲು, ನಾಗರಿಕ ಮೊದಲು’ ಎಂಬ ಆಶಯವನ್ನು ಆಡಳಿತದ ಪ್ರಮುಖ ಧ್ಯೇಯವನ್ನಾಗಿ ಮಾಡಿಕೊಂಡು ಸರ್ಕಾರ ಕಾರ್ಯನಿರ್ವಹಿಸಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಗುಜರಾತ್ ಮುಖ್ಯಮಂತ್ರಿಯಾಗಿ ಸತತ ಮೂರು ಅವಧಿಗೆ ಜನಮತ ಪಡೆದಿದ್ದ ಮೋದಿ, ಬಳಿಕ ರಾಷ್ಟ್ರಮಟ್ಟದಲ್ಲಿ ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ನೇತೃತ್ವ ನೀಡಿ ಕೇಂದ್ರದಲ್ಲಿ ಸರ್ಕಾರ ರಚಿಸಿದ್ದಾರೆ. ಕಳೆದ ಎರಡೂವರೆ ದಶಕಗಳ ಅವಧಿಯಲ್ಲಿ ಕಲ್ಯಾಣ ಯೋಜನೆಗಳು, ಆರ್ಥಿಕತೆ, ತಂತ್ರಜ್ಞಾನ, ಮೂಲಸೌಕರ್ಯ ಹಾಗೂ ರಾಷ್ಟ್ರೀಯ ಭದ್ರತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೈಗೊಂಡ ಕ್ರಮಗಳನ್ನು ಸಂಪುಟ ನಿರ್ಣಯದಲ್ಲಿ ಪ್ರಸ್ತಾಪಿಸಲಾಗಿದೆ.

60 ಕೋಟಿ ಜನಧನ್ ಖಾತೆ, 4 ಕೋಟಿ ಮನೆ ನಿರ್ಮಾಣ

ಸರ್ಕಾರದ ಪ್ರಕಾರ, ದೇಶದಲ್ಲಿ ಸುಮಾರು 60 ಕೋಟಿ ಜನಧನ್ ಖಾತೆಗಳು ತೆರೆಯಲ್ಪಟ್ಟಿದ್ದು, 4 ಕೋಟಿಗೂ ಅಧಿಕ ಮನೆಗಳ ನಿರ್ಮಾಣವಾಗಿದೆ. ಸುಮಾರು 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಸುಮಾರು 3.5 ಕೋಟಿ ಮಹಿಳೆಯರು ‘ಲಖ್ಪತಿ ದೀದಿ’ಗಳಾಗಿ ಹೊರಹೊಮ್ಮಿದ್ದು, ಪಿಎಂ-ಕಿಸಾನ್ ಯೋಜನೆಯಡಿ ರೈತರಿಗೆ ನೀಡಲಾದ ಹಣ 4 ಲಕ್ಷ ಕೋಟಿಗೂ ಮೀರಿದೆ ಎಂದು ಸರ್ಕಾರ ತಿಳಿಸಿದೆ.

UPI, GST, ಚಂದ್ರಯಾನ-3 ಸಾಧನೆಗಳ ಉಲ್ಲೇಖ

ಮೂಲಸೌಕರ್ಯ ಕ್ಷೇತ್ರದಲ್ಲೂ ಬಂಡವಾಳ ವೆಚ್ಚವು 2 ಲಕ್ಷ ಕೋಟಿಯಿಂದ 12 ಲಕ್ಷ ಕೋಟಿಗೂ ಅಧಿಕವಾಗಿದೆ ಎಂದು ಉಲ್ಲೇಖಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲೂ ಗಣನೀಯ ಏರಿಕೆ ಕಂಡಿದೆ. GST, ಮಹಿಳಾ ಮೀಸಲಾತಿ ಕಾಯ್ದೆ, UPI, ಸ್ವದೇಶಿ ಕೋವಿಡ್ ಲಸಿಕೆ ಹಾಗೂ ಚಂದ್ರಯಾನ-3 ಸಾಧನೆಗಳನ್ನು ನಿರ್ಣಯದಲ್ಲಿ ಪ್ರಮುಖ ಮೈಲಿಗಲ್ಲುಗಳಾಗಿ ಗುರುತಿಸಲಾಗಿದೆ.

ಸರ್ಜಿಕಲ್ ಸ್ಟ್ರೈಕ್‌ನಿಂದ ಆಪರೇಷನ್ ಸಿಂದೂರ್ ವರೆಗೆ

ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ 2016ರ ಸರ್ಜಿಕಲ್ ಸ್ಟ್ರೈಕ್, 2019ರ ಬಾಲಾಕೋಟ್ ವಾಯುದಾಳಿ ಹಾಗೂ 2025ರ ಆಪರೇಷನ್ ಸಿಂದೂರ್ ಸೇರಿದಂತೆ ಹಲವು ಕ್ರಮಗಳನ್ನು ಸರ್ಕಾರ ಪ್ರಸ್ತಾಪಿಸಿದೆ. ಜಿ20 ಮತ್ತು ಬ್ರಿಕ್ಸ್ ವೇದಿಕೆಗಳಲ್ಲಿ ಭಾರತದ ಪ್ರಭಾವ ಹೆಚ್ಚಿಸುವಲ್ಲಿ ಮೋದಿ ನಾಯಕತ್ವ ಮಹತ್ವದ್ದಾಗಿದೆ ಎಂದು ಸಂಪುಟ ಹೇಳಿದೆ.

25 ವರ್ಷಗಳ ರಾಜಕೀಯ ಹಾಗೂ ಆಡಳಿತಾತ್ಮಕ ಪಯಣವನ್ನು ಸ್ಮರಿಸಿರುವ ಈ ನಿರ್ಣಯವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಗುರಿಯೊಂದಿಗೆ ಮುಂದುವರಿಯುವ ಸಂಕಲ್ಪವನ್ನೂ ಪುನರುಚ್ಚರಿಸಿದೆ. ಮೋದಿ ಅವರ ನಾಯಕತ್ವದ ಮುಂದಿನ ಅಧ್ಯಾಯ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ದೇಶದ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

Must Read