ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಜನ್ಮದಿನದ ಅಂಗವಾಗಿ ಈ ಬಾರಿ ರಾಜ್ಯಾದ್ಯಂತ ಅತ್ಯಂತ ವಿನೂತನ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪಕ್ಷದ ರಜತ ಮಹೋತ್ಸವ ಹಾಗೂ ಹಿರಿಯ ನಾಯಕರ ಹುಟ್ಟುಹಬ್ಬದ ಸಂಭ್ರಮವನ್ನು ಯುವ ಸಮೂಹದೊಂದಿಗೆ ಆಚರಿಸಲು ಜೆಡಿಎಸ್ ಯುವ ಘಟಕ ಮುಂದಾಗಿದೆ. ಇದರ ಭಾಗವಾಗಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಸೇರಿದಂತೆ ನಾಡಿನಾದ್ಯಂತ ಹತ್ತು ಹಲವು ಜನಕಲ್ಯಾಣ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಗಳ ಪ್ರಯುಕ್ತ ಜನತಾದಳ ಪಕ್ಷವು ಯುವಕರನ್ನು ಆಕರ್ಷಿಸಲು “ಜನತಾದಳ ಪ್ರೀಮಿಯರ್ ಲೀಗ್” ಎಂಬ ವಿನೂತನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಕ್ರಿಕೆಟ್ ಪಂದ್ಯಾವಳಿಯು ಇದೇ ಮೇ 15, 16 ಮತ್ತು 17, ರಂದು ಬೆಂಗಳೂರಿನ ನೈಸ್ ರೋಡ್ ಬಳಿ ಇರುವ ಮಾದಾವರ ಗ್ರೌಂಡ್ಸ್ನಲ್ಲಿ ಪಂದ್ಯಗಳು ನಡೆಯಲಿದ್ದು, ಈ ಪಂದ್ಯಾವಳಿಯನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.
ಕರ್ನಾಟಕದ ಪ್ರತಿಯೊಂದು ಜಿಲ್ಲೆಯಿಂದ ಒಟ್ಟು 24 ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿದ್ದು, ಈ ತಂಡಗಳಿಗೆ ಆಯಾ ಭಾಗದ ಸ್ಥಳೀಯ ನಾಯಕರ ಹೆಸರನ್ನು ಇಡಲಾಗಿದೆ. ಈ ಪ್ರತಿಷ್ಠಿತ ಲೀಗ್‌ನಲ್ಲಿ ವಿಜೇತರಾಗುವ ತಂಡಕ್ಕೆ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಉಪಸ್ಥಿತರಿರಲಿದ್ದಾರೆ.



