August 4, 2026
Tuesday, August 4, 2026
spot_img

ಕಾಸರಗೋಡಿನಲ್ಲಿ ಮುಂದುವರಿದ ಕಡಲಾರ್ಭಟ: ಸಂಕಷ್ಟದಲ್ಲಿ 88ಕ್ಕೂ ಅಧಿಕ ಕುಟುಂಬ, 325ಕ್ಕೂ ಹೆಚ್ಚು ಜನರ ಸ್ಥಳಾಂತರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಸರಗೋಡು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗಿದ್ದರೂ, ಸಮುದ್ರದ ಅಬ್ಬರ ಮಾತ್ರ ಇನ್ನೂ ತಗ್ಗಿಲ್ಲ. ಕುಂಬಳೆ, ಮಂಜೇಶ್ವರ ಹಾಗೂ ಉಪ್ಪಳ ಕರಾವಳಿ ಭಾಗಗಳಲ್ಲಿ ಕಡಲಕೊರೆತ ತೀವ್ರಗೊಂಡಿದ್ದು, ಕರಾವಳಿ ನಿವಾಸಿಗಳು ಭೀತಿಯಲ್ಲಿದ್ದಾರೆ. ಹಲವೆಡೆ ಸಮುದ್ರದ ನೀರು ತೀರವನ್ನು ಕೊರೆದು ಮುಂದೆ ಸಾಗುತ್ತಿದ್ದು, ಇಲ್ಲಿ ಹತ್ತಕ್ಕೂ ಹೆಚ್ಚು ಮನೆಗಳು ಅಪಾಯದ ಅಂಚಿನಲ್ಲಿವೆ.

ಉಪ್ಪಳದ ಶಾರದಾ ನಗರ ಪ್ರದೇಶದಲ್ಲಿ ಒಂದು ಮನೆ ಸಂಪೂರ್ಣವಾಗಿ ಸಮುದ್ರ ಪಾಲಾಗಿದ್ದು, ಸಮೀಪದ ಇನ್ನೂ ಮೂರು ಮನೆಗಳು ಯಾವುದೇ ಕ್ಷಣದಲ್ಲಿ ಕುಸಿಯುವ ಸ್ಥಿತಿಯಲ್ಲಿವೆ. ಕಡಲಿನ ಅಬ್ಬರದಿಂದ ಹಲವಾರು ತೆಂಗಿನ ಮರಗಳು ಉರುಳಿದ್ದು, ಮೀಟರ್‌ಗಟ್ಟಲೆ ಕರಾವಳಿ ಭೂಭಾಗವೂ ಸಮುದ್ರದಲ್ಲಿ ಕೊಚ್ಚಿಹೋಗಿದೆ. ಜಿಲ್ಲೆಯ ಪ್ರಮುಖ ನದಿಗಳಾದ ಮಧುವಾಹಿನಿ, ಕಾರ್ಯಂಗೋಡು ಮತ್ತು ತೇಜಸ್ವಿನಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಹೆಚ್ಚಿಸಿದೆ.

ಇದನ್ನೂ ಓದಿ:

ಸುರಕ್ಷಿತ ಸ್ಥಳಗಳಿಗೆ 325ಕ್ಕೂ ಹೆಚ್ಚು ಜನರ ಸ್ಥಳಾಂತರ

ಕಡಲ್ಕೊರೆತ ಹಾಗೂ ಪ್ರವಾಹ ಆತಂಕದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ 88 ಕುಟುಂಬಗಳ 325ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಸ್ಥಳಾಂತರಗೊಂಡವರಲ್ಲಿ 132 ಪುರುಷರು, 143 ಮಹಿಳೆಯರು ಹಾಗೂ 50 ಮಕ್ಕಳು ಸೇರಿದ್ದಾರೆ. ಈ ಪೈಕಿ 67 ಕುಟುಂಬಗಳು ಸಂಬಂಧಿಕರ ಮನೆಗಳಿಗೆ ತೆರಳಿದ್ದರೆ, ಉಳಿದ ಸಂತ್ರಸ್ತರಿಗಾಗಿ ವೆಳ್ಳರಿಕುಂಡು ಮತ್ತು ಹೊಸದುರ್ಗ ತಾಲೂಕುಗಳಲ್ಲಿ ಆರು ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ.

ಕರಾವಳಿ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನೂ ಸೂಕ್ಷ್ಮವಾಗಿರುವುದರಿಂದ, ಸಮುದ್ರ ತೀರ ಹಾಗೂ ನದಿ ತೀರ ಪ್ರದೇಶಗಳಿಗೆ ಅನಗತ್ಯವಾಗಿ ತೆರಳದಂತೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !