ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ರಾಜಕೀಯ ಬಿರುಗಾಳಿ ಎದ್ದಿದ್ದು, ಒಂದೆಡೆ ಭರ್ಜರಿ ಗೆಲುವು ಸಾಧಿಸುವಾಗ ಮೂಲಕ ಟಿವಿಕೆ ಪಕ್ಷದ ನಾಯಕ ವಿಜಯ್ ನೂತನ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದರೆ, ಮತ್ತೊಂದೆಡೆ ಸೋಲಿನ ಬೆನ್ನಲ್ಲೇ ವಿರೋಧ ಪಕ್ಷ ಎಐಎಡಿಎಂಕೆ ಎರಡು ಭಾಗವಾಗಿದೆ.
ಚುನಾವಣೆಯಲ್ಲಿ ಸೋಲಿನ ಬೆನ್ನಲ್ಲೇ ಸಿ.ವಿ. ಷಣ್ಮುಗಂ ನೇತೃತ್ವದ ಬಣ ಮಂಗಳವಾರ ಮಹತ್ವದ ನಿರ್ಧಾರವನ್ನು ತೆಗೆದುಗೊಂಡಿದ್ದು, ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ನೇತೃತ್ವದ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ.
ಈ ಕುರಿತು ಮಾತನಾಡಿದ ಷಣ್ಮುಗಂ, ಇಂದಿನ ಎಐಎಡಿಎಂಕೆಯಲ್ಲಿನ ವಿಭಜನೆಗೆ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ನೇರ ಕಾರಣವಾಗಿದ್ದಾರೆ ಎಂದು ಟೀಕಿಸಿದರು.
ಕಳೆದ 53 ವರ್ಷಗಳಿಂದ ನಮಗೆ ಡಿಎಂಕೆ ಬದ್ಧ ವೈರಿ. ಆದರೆ ಎಡಪ್ಪಾಡಿ ಪಳನಿಸ್ವಾಮಿ ಅಧಿಕಾರಕ್ಕಾಗಿ ಡಿಎಂಕೆ ಜೊತೆ ಮೈತ್ರಿ ಮಾಡಲು ಯತ್ನಿಸಿದ್ದರು. ಈ ನಿರ್ಧಾರಕ್ಕೆ ಪಕ್ಷದ ಬಹುಪಾಲು ಸದಸ್ಯರು ತೀವ್ರವಾಗಿ ವಿರೋಧಿಸಿದರು. ಒಂದು ವೇಳೆ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡರೆ, ಎಐಎಡಿಎಂಕೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದೆವು. ಆದರೆ ನಮ್ಮ ಮಾತಿಗೆ ಬೆಲೆ ಇರಲಿಲ್ಲ. ಹಾಗಾಗಿ ನಾವು ಟಿವಿಕೆಯನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಅತ್ತ ಪಳನಿಸ್ವಾಮಿ ನಾಯಕತ್ವದ ವಿರುದ್ಧ ತ್ರೀವ ಅಸಮಾಧಾನ ಭುಗಿಲೆದಿದ್ದು, ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ಜವಾಬ್ದಾರಿಯನ್ನು ಹೊತ್ತುಕೊಂಡು ರಾಜೀನಾಮೆ ನೀಡಬೇಕೆಂದು ಬಹುತೇಕ ಶಾಸಕರು ಒತ್ತಾಯಿಸುತ್ತಿದ್ದಾರೆ.



