ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಲ್ಲಂಗಡಿ ಹಣ್ಣು ತಿಂದು ಮುಂಬೈ ಮೂಲದ ಕುಟುಂಬವೊಂದು ಸಾವನಪ್ಪಿದ್ದ ವಾರಗಳ ನಂತರ ಇದೀಗ ಛತ್ತೀಸ್ಗಢದಲ್ಲಿ ಕಲ್ಲಂಗಡಿ ಹಣ್ಣು ಸೇವಿಸಿ 15 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.
ಛತ್ತೀಸ್ಗಢದ ಜಾಂಜಗೀರ್-ಚಂಪಾದಲ್ಲಿ ಈ ಘಟನೆ ಸಂಭವಿಸಿದ್ದು, ಮದುವೆ ಕಾರ್ಯಕ್ರಮಕ್ಕೆ ಹೋಗಿ ಮನೆಗೆ ಬಂದಿದ್ದ ಮಕ್ಕಳು, ಅಲ್ಲಿ ಕತ್ತರಿಸಿ ಇಟ್ಟಿದ್ದ ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದಾರೆ. ಈ ವೇಳೆ 15 ವರ್ಷದ ಬಾಲಕ ಮೃತಪಟ್ಟಿದ್ದು, ಉಳಿದ ಮೂವರು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತಪಟ್ಟ ಬಾಲಕನನ್ನು ಬಾಲಕನನ್ನು ಪೋಡಿ ದಲ್ಹಾ ಗ್ರಾಮದ ಅಖಿಲೇಶ್ ಧಿವರ್ (15) ಎಂದು ಗುರುತಿಸಲಾಗಿದೆ.
ಹಣ್ಣು ತಿಂದ ಕೆಲವೇ ಗಂಟೆಗಳಲ್ಲಿ ಮಕ್ಕಳಿಗೆ ವಾಂತಿ, ಭೇದಿ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಅಖಿಲೇಶ್ ಸಾವನ್ನಪ್ಪಿದ್ದಾನೆ. ಉಳಿದ ಮೂವರು ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಫುಡ್ ಪಾಯಿಸನಿಂಗ್ ಆಗಿರುವ ಸಾಧ್ಯತೆಯಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಜಿಲ್ಲಾಧಿಕಾರಿಗಳು ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ಅಖಿಲೇಶ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮನೆಯಲ್ಲಿ ಇರುವ ಉಳಿದ ಕಲ್ಲಂಗಡಿ ಹಣ್ಣನ್ನು ಆಹಾರ ಸುರಕ್ಷತಾ ಇಲಾಖೆಗೆ ಪ್ರಯೋಗಾಲಯ ಪರೀಕ್ಷೆಗಾಗಿ ಕಳುಹಿಸಲಾಗಿದೆ. ವರದಿಗಳು ಬಂದ ನಂತರವೇ ನಿಖರವಾದ ಕಾರಣ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ



