ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಕಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಂಕಷ್ಟಗಳು ಹೆಚ್ಚುತ್ತಿವೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 86 ರನ್‌ಗಳಿಗೆ ಆಲೌಟ್ ಆಗಿ ಮುಖಭಂಗ ಅನುಭವಿಸಿದ ಹೈದರಾಬಾದ್ ತಂಡಕ್ಕೆ ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಗ್ ಶಾಕ್ ನೀಡಿದೆ. ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡ ಕಾರಣಕ್ಕಾಗಿ ನಾಯಕ ಪ್ಯಾಟ್ ಕಮ್ಮಿನ್ಸ್‌ಗೆ ಭಾರಿ ದಂಡ ವಿಧಿಸಲಾಗಿದೆ.
ಗುಜರಾತ್ ವಿರುದ್ಧದ ಪಂದ್ಯದ ವೇಳೆ ನಿಗದಿತ ಸಮಯದೊಳಗೆ ಓವರ್‌ಗಳನ್ನು ಪೂರ್ಣಗೊಳಿಸಲು ಸನ್‌ರೈಸರ್ಸ್ ವಿಫಲವಾಯಿತು. ಇದು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22ರ ಅಡಿಯಲ್ಲಿ ಉಲ್ಲಂಘನೆಯೆಂದು ಪರಿಗಣಿಸಲಾಗಿದ್ದು, ಮೊದಲ ತಪ್ಪಿಗಾಗಿ ಪ್ಯಾಟ್ ಕಮ್ಮಿನ್ಸ್‌ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಪ್ರಸಕ್ತ ಸೀಸನ್‌ನಲ್ಲಿ ಸ್ಲೋ ಓವರ್ ರೇಟ್ ಸಂಕಷ್ಟಕ್ಕೆ ಸಿಲುಕಿದ್ದು ಕಮ್ಮಿನ್ಸ್ ಒಬ್ಬರೇ ಅಲ್ಲ. ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಈಗಾಗಲೇ ಎರಡು ಬಾರಿ ಈ ತಪ್ಪು ಮಾಡಿ ದಂಡ ತೆತ್ತಿದ್ದಾರೆ. ಇವರ ಜೊತೆಗೆ ಶುಭ್ಮನ್ ಗಿಲ್, ಅಜಿಂಕ್ಯ ರಹಾನೆ, ಹಾರ್ದಿಕ್ ಪಾಂಡ್ಯ, ರುತುರಾಜ್ ಗಾಯಕ್ವಾಡ್ ಮತ್ತು ಅಕ್ಷರ್ ಪಟೇಲ್ ಕೂಡ ಈ ಬಾರಿ ದಂಡದ ಶಿಕ್ಷೆಗೆ ಗುರಿಯಾದ ನಾಯಕರ ಪಟ್ಟಿಯಲ್ಲಿದ್ದಾರೆ.
ಗುಜರಾತ್ ಟೈಟಾನ್ಸ್ ನೀಡಿದ 169 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್, ಗುಜರಾತ್ ಬೌಲರ್‌ಗಳ ಆರ್ಭಟಕ್ಕೆ ತತ್ತರಿಸಿತು.
ಸಾಯಿ ಸುದರ್ಶನ್ (61) ಮತ್ತು ವಾಷಿಂಗ್ಟನ್ ಸುಂದರ್ (52) ಅವರ ಅರ್ಧಶತಕಗಳ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು.
169 ರನ್ ಬೆನ್ನಟ್ಟಿದ ಹೈದರಾಬಾದ್ ಕೇವಲ 14.5 ಓವರ್‌ಗಳಲ್ಲಿ 86 ರನ್‌ಗಳಿಗೆ ಆಲೌಟ್ ಆಗಿ, 82 ರನ್‌ಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿತು.
ಗುಜರಾತ್ ಪರ ರಬಾಡ ಮತ್ತು ಜೇಸನ್ ಹೋಲ್ಡರ್ ತಲಾ 3 ವಿಕೆಟ್ ಪಡೆದು ಹೈದರಾಬಾದ್ ಪತನಕ್ಕೆ ಕಾರಣರಾದರು.



