ಹೊಸ ದಿಗಂತ ವರದಿ,ದಾಂಡೇಲಿ :
ದಾಂಡೇಲಿಯ ಪ್ರವಾಸಿ ಮಂದಿರದ ಹತ್ತಿರ ಕಾಳಿ ನದಿಯ ದಂಡೆಯಲ್ಲಿ ಮೊಸಳೆಯೊಂದು ಸರಿ ಸುಮಾರು 40 ಮರಿಗಳಿಗೆ ಜನ್ಮ ನೀಡಿದೆ .
ಕಳೆದ ಎರಡು ತಿಂಗಳಿನಿಂದ ದಂಡೆಯಲ್ಲಿ ಗವಿಯಾಕಾರದ ಸ್ಥಳವನ್ನು ಮಾಡಿಕೊಂಡು ಬೃಹತ್ ಗಾತ್ರದ ಮೊಸಳೆಯೊಂದು ನಲವತ್ತಕ್ಕೂ ಹೆಚ್ಚು ಮೊಟ್ಟೆಗಳನ್ನು ಇಟ್ಟಿದೆ. ಇದೀಗ ಆ ಮೊಟ್ಟೆಗಳು ಒಡೆದು ಮರಿಗಳಾಗಿ ಹೊರ ಬಂದಿವೆ. ನದಿ ದಂಡೆಯ ಪ್ರದೇಶದಲ್ಲಿ ಈ ಮೊಸಳೆಯ ಮರಿಗಳು ಓಡಾಡಿಕೊಳ್ಳಲು ಶುರುವಚ್ಚಿಕೊಂಡಿವೆ.
ಕೇವಲ ಒಂದು ಮೊಸಳೆ ಸರಿ ಸುಮಾರು 40 ಮರಿಗಳಿಗೆ ಜನ್ಮ ನೀಡಿದ್ದು, ಮುಂದಿನ ದಿನಗಳಲ್ಲಿ ನದಿಯಲ್ಲಿ ಸಾವಿರ ಸಂಖ್ಯೆಯಲ್ಲಿರುವ ಮೊಸಳೆಗಳು ಇನ್ನೆಷ್ಟು ಮರಿಗಳಿಗೆ ಜನ್ಮ ನೀಡಬಹುದು ಎಂಬ ಆತಂಕ ಮನೆ ಮಾಡಿದೆ. ಇದರಿಂದ ಮುಂದೊಂದು ದಿನ ಕಾಳಿ ನದಿ ಸಂಪೂರ್ಣ ಮೊಸಳೆಗಳ ಕೈವಶವಾಗಲಿದೆ. ಭವಿಷ್ಯದ ದಿನಗಳಲ್ಲಿ ಜಲ ಸಾಹಸ ಕ್ರೀಡೆಗೂ ಆತಂಕವನ್ನು ತಂದೊಡ್ಡುವ ದಿನ ದೂರವಿಲ್ಲ ಎಂಬ ಮಾತು ಚರ್ಚೆಯಲ್ಲಿದೆ.
ಈ ನಿಟ್ಟಿನಲ್ಲಿ ಮೊಸಳೆಗಳ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆಯವರು ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ ಎಂದು ಆಗ್ರಹಗಳು ಕೇಳಿಬರುತ್ತಿದೆ.
ಒಂದು ಕಾಲದಲ್ಲಿ ದಾಂಡೇಲಿ ಎಂದರೆ ಕೈಗಾರಿಕಾ ನಗರಿ ಎಂಬ ಜನಪ್ರಿಯತೆಯನ್ನು ಗಳಿಸಿತ್ತು. ಆ ಜನಪ್ರಿಯತೆ ಇನ್ನೂ ಕೂಡ ಮುಂದುವರೆದಿದೆ. ಇತ್ತೀಚಿನ ಕೆಲವು ವರ್ಷಗಳಿಂದ ದಾಂಡೇಲಿ ಪ್ರವಾಸಿ ನಗರವಾಗಿಯೂ ಜಾಗತಿಕ ಮಟ್ಟದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದೆ. ಇದರ ನಡುವೆಯೂ ಕಳೆದ ಕೆಲವು ವರ್ಷಗಳಿಂದ ಮೊಸಳೆ ದಾಳಿಯ ಮೂಲಕವೂ ಗಮನ ಸೆಳೆದಿರುವುದನ್ನು ನಾವು ಕಾಣುತ್ತಿದ್ದೇವೆ. ಈಗಾಗಲೇ ಇಲ್ಲಿಯ ಮೊಸಳೆಗಳು ಐವರನ್ನು ಬಲಿ ಪಡೆದಿರುವುದನ್ನು ಇಲ್ಲಿ ಉಲ್ಲೇಖಿಸಲೇಬೇಕು. ಮೊಸಳೆಗಳ ದಾಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ, ನಗರಸಭೆ, ತಾಲೂಕಾಡಳಿತ ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡ ಕೈಗೊಂಡಿದೆ. ಆದಾಗ್ಯೂ ಆಗೊಮ್ಮೆ ಈಗೊಮ್ಮೆ ಆಹಾರವನ್ನರಸಿ ಮೊಸಳೆಗಳು ತಡೆಬೇಲಿಯನ್ನು ದಾಟಿ ಹೊರಗಡೆ ಬರುತ್ತಿರುವುದು ಸಾಮಾನ್ಯ ಎಂಬಂತಾಗಿದೆ.



