ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಬಿಸಿಲಿನ ಬೇಗೆಯ ನಡುವೆಯೇ ವರುಣನ ಆಗಮನದ ಸುದ್ದಿ ಸಮಾಧಾನ ತಂದಿದೆ. ಉತ್ತರ ಒಳನಾಡಿನಲ್ಲಿ ತಾಪಮಾನ ಏರಿಕೆಯ ಎಚ್ಚರಿಕೆ ಇದ್ದರೂ, ನಾಳೆ ಕರ್ನಾಟಕದ ಮುಕ್ಕಾಲು ಭಾಗದಷ್ಟು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಂಡ್ಯ ಮತ್ತು ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲೆಡೆ ಮಳೆರಾಯನ ಆರ್ಭಟ ಇರಲಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ, ರಾಜ್ಯದ ಈ ಕೆಳಗಿನ ಭಾಗಗಳಲ್ಲಿ ಮಳೆಯ ನಿರೀಕ್ಷೆಯಿದೆ:
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗಾಳಿ-ಮಿಂಚು ಸಹಿತ ಮಳೆಯಾಗಲಿದೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇದೆ.
ರಾಜಧಾನಿ ಬೆಂಗಳೂರಿನಲ್ಲಿ ನಾಳೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ನಗರದ ಗರಿಷ್ಠ ತಾಪಮಾನ 34°C ಮತ್ತು ಕನಿಷ್ಠ ತಾಪಮಾನ 23°C ದಾಖಲಾಗುವ ನಿರೀಕ್ಷೆಯಿದೆ. ಗಾಳಿಯು ಗಂಟೆಗೆ ಸುಮಾರು 10 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಅಂದಾಜಿಸಲಾಗಿದೆ.
ಒಂದೆಡೆ ಮಳೆಯ ಮುನ್ಸೂಚನೆ ಇದ್ದರೆ, ಮತ್ತೊಂದೆಡೆ ಬಾಗಲಕೋಟೆ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಅಷ್ಟೇ ಅಲ್ಲದೆ, ಮುಂದಿನ ಐದು ದಿನಗಳ ಕಾಲ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.



