July 14, 2026
Tuesday, July 14, 2026
spot_img

ದೆಹಲಿಯಲ್ಲಿ ಭೀಕರ ಕೃತ್ಯ: ಸ್ಲೀಪರ್ ಬಸ್‌ನಲ್ಲಿ ಮಹಿಳೆ ಮೇಲೆ ಗ್ಯಾಂಗ್‌ರೇ*ಪ್, ಚಾಲಕ- ಕಂಡಕ್ಟರ್ ಬಂಧನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೆಹಲಿಯ ರಾಣಿ ಬಾಗ್ ಪ್ರದೇಶದಲ್ಲಿ ಸೋಮವಾರ (ಮೇ 11) ರಾತ್ರಿ ನಿಲ್ಲಿಸಿದ್ದ ಸ್ಲೀಪರ್ ಬಸ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಗ್ಯಾಂಗ್‌ರೇಪ್ ನಡೆದಿರುವ ದಾರುಣ ಘಟನೆ ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಬಸ್ ಚಾಲಕ ಮತ್ತು ಕಂಡಕ್ಟರ್‌ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಮೂರು ಮಕ್ಕಳ ತಾಯಿಯಾಗಿರುವ ಈ ವಿವಾಹಿತ ಮಹಿಳೆ ಪೀತಾಮ್‌ಪುರದ ಕೊಳೆಗೇರಿ ನಿವಾಸಿಯಾಗಿದ್ದು, ಮಂಗೋಲಪುರಿಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಮೇ 11 ರ ರಾತ್ರಿ ಮಹಿಳೆ ಕೆಲಸ ಮುಗಿಸಿ ಎಂದಿನಂತೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಸರಸ್ವತಿ ವಿಹಾರ್ ಬಸ್ ನಿಲ್ದಾಣದಲ್ಲಿ ಸ್ಲೀಪರ್ ಬಸ್ಸೊಂದು ಬಂದು ನಿಂತಿದೆ. ಮಹಿಳೆ ಸಮಯ ಕೇಳಲು ಬಸ್ ಬಾಗಿಲ ಬಳಿ ನಿಂತಿದ್ದ ವ್ಯಕ್ತಿಯನ್ನು ಸಂಪರ್ಕಿಸಿದಾಗ, ಆಕೆಯನ್ನು ಬಲವಂತವಾಗಿ ಬಸ್ ಒಳಗಡೆ ಎಳೆದುಕೊಳ್ಳಲಾಗಿದೆ.

ಬಳಿಕ ಆರೋಪಿಗಳು ಬಸ್ಸನ್ನು ನಾಂಗ್ಲೋಯ್ ಕಡೆಗೆ ಚಲಾಯಿಸಿಕೊಂಡು ಹೋಗಿ, ರಾಣಿ ಬಾಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಲ್ಲಿಸಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯ ನಂತರ ದೆಹಲಿ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡು, ಚಾಲಕ ಮತ್ತು ಕಂಡಕ್ಟರ್ ಇಬ್ಬರನ್ನೂ ಬಂಧಿಸಿ. ಅಪರಾಧಕ್ಕೆ ಬಳಸಲಾಗಿದ್ದ ಸ್ಲೀಪರ್ ಬಸ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿದ ಪೊಲೀಸರು, ಎಲ್ಲಾ ಆಯಾಮಗಳಿಂದಲೂ ಪರಿಶೀಲನೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !