September 10, 2026
Thursday, September 10, 2026
spot_img

ಚಿನ್ನದ ಖರೀದಿ, ಇಂಧನ ಬಳಕೆಗೆ ಬ್ರೇಕ್: ಮೋದಿ ಹಾದಿಯಲ್ಲಿ ಸಾಗಲು ಕರ್ನಾಟಕ ಬಿಜೆಪಿ ಸಜ್ಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಇಂಧನ ಉಳಿತಾಯ ಮತ್ತು ಚಿನ್ನದ ಖರೀದಿಯನ್ನು ಕಡಿಮೆ ಮಾಡುವುದು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಮಿತವ್ಯಯದ ಕರೆಯನ್ನು ಕರ್ನಾಟಕದ ಬಿಜೆಪಿ ನಾಯಕರು ಕಟ್ಟುನಿಟ್ಟಾಗಿ ಪಾಲಿಸಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್‌, ನಾವು ಬಳಸುವ ಕಾರುಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಶೇಕಡಾ 30 ರಿಂದ 50 ರಷ್ಟು ಕಡಿತಗೊಳಿಸುತ್ತೇವೆ. ಅತ್ಯಂತ ತುರ್ತು ಸಂದರ್ಭಗಳಲ್ಲಿ ಮಾತ್ರ ಎಸ್ಕಾರ್ಟ್ ವಾಹನಗಳನ್ನು ಬಳಸಲಿದ್ದೇವೆ ಎಂದು ಹೇಳಿದ್ದಾರೆ.

ಪ್ರಧಾನಿಯವರ ಕರೆಗೆ ಸಾರ್ವಜನಿಕರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದ ಅವರು, ನನ್ನ ಮನೆಯಲ್ಲೂ ಸಹ ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವಂತೆ ತಿಳಿಸಿದ್ದೇನೆ. ಇನ್ನು, ಕೇಂದ್ರ ಸಚಿವರು ಮತ್ತು ಉನ್ನತ ಅಧಿಕಾರಿಗಳು ಈಗಾಗಲೇ ಪ್ರಧಾನಮಂತ್ರಿ ಕರೆಗೆ ಸ್ಪಂದಿಸಿದ್ದು, ಮೆಟ್ರೋದಂತಹ ಸಮೂಹ ಸಾರಿಗೆ ವ್ಯವಸ್ಥೆಗಳನ್ನು ಬಳಸಲು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಶೋಕ, ದಲಿತ ಸಮುದಾಯದ ಮೀಸಲಾತಿ ಕೋಟಾವನ್ನು ದಿಢೀರ್ ಕಡಿತಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಅವರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರವು ಅಂದಿನ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪಸಮಿತಿ ವರದಿ ಮತ್ತು ಸದಾಶಿವ ಆಯೋಗದ ವರದಿಗಳನ್ನು ಆಧರಿಸಿ ಪರಿಶಿಷ್ಟ ಜಾತಿ (SC) ಮೀಸಲಾತಿಯನ್ನು ಶೇ. 15 ರಿಂದ ಶೇ. 17 ಕ್ಕೆ ಮತ್ತು ಪರಿಶಿಷ್ಟ ಪಂಗಡ (ST) ಮೀಸಲಾತಿಯನ್ನು ಶೇ. 3 ರಿಂದ ಶೇ. 7 ಕ್ಕೆ ಹೆಚ್ಚಿಸಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಆದರೆ ಪ್ರಸ್ತುತ ಸರ್ಕಾರವು ಎಸ್‌ಸಿ/ಎಸ್‌ಟಿ ಕೋಟಾವನ್ನು ಉಲ್ಟಾ ಮಾಡಿದೆ. ಈ ತಪ್ಪನ್ನು ತಕ್ಷಣವೇ ಸರಿಪಡಿಸದಿದ್ದರೆ ಉಗ್ರ ಹೋರಾಟದ ಮೂಲಕ ಸಮುದಾಯಗಳು ಈ ಸರ್ಕಾರವನ್ನು ಕಿತ್ತೊಗೆಯಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !