October 9, 2026
Friday, October 9, 2026
spot_img

ಮುಂಬೈ-ಗೋವಾ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ನಿತಿನ್ ಗಡ್ಕರಿ ಆಕ್ರೋಶ: ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿರುವುದಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಗೋವಾದ ಪಣಜಿ ಸಮೀಪದ ಪೋರ್ವೊರಿಮ್‌ನಲ್ಲಿ ಆರು ಪಥಗಳ ಎಲಿವೇಟೆಡ್ ರಸ್ತೆ ಕಾರಿಡಾರ್ ಉದ್ಘಾಟಿಸಿ ಮಾತನಾಡಿದ ಅವರು, ಹೆದ್ದಾರಿ ಕಾಮಗಾರಿ ಇಷ್ಟೊಂದು ವರ್ಷ ವಿಳಂಬವಾಗಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ. ಹಾಗಾಗಿ ಇದರ ಉದ್ಘಾಟನಾ ಕಾರ್ಯಕ್ರಮಕ್ಕೆ ನಾನು ಖಂಡಿತ ಬರುವುದಿಲ್ಲ ಎಂದು ಗುತ್ತಿಗೆದಾರರ ವಿರುದ್ಧ ಚಾಟಿ ಬೀಸಿದ್ದಾರೆ. ಬದಲಿಗೆ, ಮುಂಬರುವ ಅಕ್ಟೋಬರ್‌ನಲ್ಲಿ ತಾವೇ ಖುದ್ದಾಗಿ ಮುಂಬೈನಿಂದ ಗೋವಾಕ್ಕೆ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಿ, ಹೆದ್ದಾರಿಯು ಜನಸಾಮಾನ್ಯರಿಗೆ ಎಷ್ಟು ಅನುಕೂಲಕರವಾಗಿದೆ ಎಂಬುದನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

ಅಧಿಕಾರಿಗಳಿಗೆ ಖಡಕ್‌ ವಾರ್ನಿಂಗ್

ಮೂಲಸೌಕರ್ಯ ಯೋಜನೆಗಳಲ್ಲಿ ಬೇಜವಾಬ್ದಾರಿ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಸಚಿವರು, ಒಂದೇ ವರ್ಷದಲ್ಲಿ ಅತಿ ಹೆಚ್ಚು ಗುತ್ತಿಗೆದಾರರನ್ನು ಹಾಗೂ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸುವುದಾಗಿ ಎಚ್ಚರಿಸಿದ್ದಾರೆ.

15 ವರ್ಷಗಳಿಂದ ಮುಗಿಯದ ಕಾಮಗಾರಿ

ಮುಂಬೈ-ಗೋವಾ ಹೆದ್ದಾರಿ ಅಗಲೀಕರಣ ಕಾಮಗಾರಿ 2011 ರಲ್ಲಿ ಆರಂಭವಾಗಿತ್ತು. ಈ ಹಳೆಯ ದ್ವಿಪಥ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸಿ, 12 ಗಂಟೆಗಳ ಪ್ರಯಾಣದ ಸಮಯವನ್ನು 6 ಗಂಟೆಗೆ ಇಳಿಸುವುದು ಇದರ ಮೂಲ ಯೋಜನೆಯಾಗಿತ್ತು. 2016 ಕ್ಕೇ ಪೂರ್ಣಗೊಳ್ಳಬೇಕಿದ್ದ ಈ ಯೋಜನೆ ಈಗಾಗಲೇ ಹಲವು ಗಡುವುಗಳನ್ನು ಮೀರಿದೆ.

ಸದ್ಯಕ್ಕೆ ಈ ಹೆದ್ದಾರಿಯ ಸುಮಾರು ಶೇ. 93 ರಿಂದ 94 ರಷ್ಟು ಕೆಲಸ ಮುಗಿದಿದೆ ಎಂದು ಅಂದಾಜಿಸಲಾಗಿದೆ. ಆದರೆ, ಪ್ರಮುಖ ಬೈಪಾಸ್‌ಗಳು, ಸೇತುವೆಗಳು ಮತ್ತು ಸಂಪರ್ಕ ರಸ್ತೆಗಳ ಕೆಲಸ ಇನ್ನೂ ಬಾಕಿ ಉಳಿದಿದೆ. ಗಣೇಶ ಚತುರ್ಥಿಯ ವೇಳೆಗೆ ಹೆಚ್ಚಿನ ಭಾಗ ಮುಗಿಸುವ ಗುರಿ ಹೊಂದಲಾಗಿತ್ತಾದರೂ, ಮಹಾರಾಷ್ಟ್ರದ ಮಾಂಗಾವ್ ಬೈಪಾಸ್ ಕಾಮಗಾರಿ ಮುಗಿಯಲು ಜನವರಿ 2027 ರ ಗಡುವು ನೀಡಲಾಗಿದೆ.

ಇದನ್ನೂ ಓದಿ:

ವಿಳಂಬಕ್ಕೆ ಕಾರಣವೇನು?

ಸುಮಾರು 16,000 ಕೋಟಿ ರೂ. ಬೃಹತ್ ವೆಚ್ಚದ ಈ ಯೋಜನೆ ವಿಳಂಬವಾಗಲು ಭೂಸ್ವಾಧೀನ ಪ್ರಕ್ರಿಯೆಯ ಕಾನೂನು ತೊಡಕುಗಳು, ಅರಣ್ಯ ಇಲಾಖೆಯ ಅನುಮತಿ ಸಿಗುವುದು ತಡವಾಗಿದ್ದು ಹಾಗೂ ಗುತ್ತಿಗೆದಾರರ ವೈಫಲ್ಯಗಳು ಪ್ರಮುಖ ಕಾರಣ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದರ ನಡುವೆ, ಹೊಸದಾಗಿ ನಿರ್ಮಿಸಲಾದ ರಸ್ತೆಗಳು ಮೊದಲ ಮಳೆಗೆ ತತ್ತರಿಸಿದ್ದು, ಹಲವೆಡೆ ಗುಂಡಿಗಳು ಬಿದ್ದಿವೆ. ಅಲ್ಲದೆ, 2021 ರಲ್ಲಿ ಕರ್ನಾಲಾ ವನ್ಯಜೀವಿ ಅಭಯಾರಣ್ಯದ ಬಳಿ ನಿರ್ಮಿಸಲಾಗಿದ್ದ ಓವರ್‌ಪಾಸ್ ಕುಸಿದಿರುವುದು ಹೆದ್ದಾರಿಯ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.

ಕೆಲವೆಡೆ ಕೆಲಸ ಅಪೂರ್ಣವಾಗಿದ್ದರೂ ಮೇ ತಿಂಗಳಿನಿಂದಲೇ ಖಾರ್ಪಾಡಾ ಪ್ಲಾಜಾದಲ್ಲಿ ಟೋಲ್ ವಸೂಲಿ ಆರಂಭಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹೆದ್ದಾರಿಯ ಚಿಪ್ಲೂನ್‌ನಲ್ಲಿ 1.84 ಕಿಮೀ ಉದ್ದದ ಆರು ಪಥಗಳ ಬೃಹತ್ ಫ್ಲೈಓವರ್ ನಿರ್ಮಾಣವಾಗುತ್ತಿದ್ದು, ಇಡೀ ಹೆದ್ದಾರಿ ಪೂರ್ಣಗೊಂಡರೆ ಕೊಂಕಣ ಭಾಗದ ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ದೊಡ್ಡ ಬೂಸ್ಟ್ ಸಿಗಲಿದೆ.

Must Read