May 14, 2026
Thursday, May 14, 2026
spot_img

ಸಿಎಂ ವಿಜಯ್ ಅನುಮತಿ ಸಿಕ್ಕಿದ್ರೂ ‘ಕರುಪ್ಪು’ ಫಸ್ಟ್ ಶೋ ಕ್ಯಾನ್ಸಲ್: ಬೇಜಾರ್ ಮಾಡ್ಕೊಂಡ ಫ್ಯಾನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಲಿವುಡ್ ಅಭಿಮಾನಿಗಳು ಬಹಳ ದಿನಗಳಿಂದ ಕಾದಿದ್ದ ‘ಕರುಪ್ಪು’ ಸಿನಿಮಾ ಬಿಡುಗಡೆಯ ದಿನವೇ ಗೊಂದಲಕ್ಕೆ ಕಾರಣವಾಗಿದೆ.

ಸೂರ್ಯ ಮತ್ತು ತ್ರಿಶಾ ಜೋಡಿಯ ಈ ಬಹುನಿರೀಕ್ಷಿತ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬೆಳಿಗ್ಗೆ 9 ಗಂಟೆಯ ವಿಶೇಷ ಪ್ರದರ್ಶನಗಳನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಚಿತ್ರ ಇಂದು ರಾಜ್ಯಾದ್ಯಂತ ತೆರೆಕಂಡಿದ್ದು, ಮೊದಲ ದಿನದ ಮೊದಲ ಶೋ ನೋಡಲು ಅನೇಕ ಅಭಿಮಾನಿಗಳು ಮುಂಜಾನೆಯೇ ಚಿತ್ರಮಂದಿರಗಳ ಮುಂದೆ ಸೇರಿದ್ದರು. ಇದೇ ವೇಳೆ ಚಿತ್ರದ ನಿರ್ಮಾಪಕ ಎಸ್‌ಆರ್ ಪ್ರಭು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿ, ಅನಿವಾರ್ಯ ಕಾರಣಗಳಿಂದ ಬೆಳಗಿನ ಪ್ರದರ್ಶನಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ನಿಖರ ಕಾರಣವನ್ನು ಬಹಿರಂಗಪಡಿಸದಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ಮುಂಚಿತವಾಗಿ ರಜೆ ತೆಗೆದುಕೊಂಡು ಸಿನಿಮಾ ನೋಡಲು ಬಂದಿದ್ದೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಮಧ್ಯಾಹ್ನದ ಶೋ ನಡೆಯುತ್ತದೆಯೇ ಎಂಬ ಪ್ರಶ್ನೆಯೂ ಎದುರಾಗಿತ್ತು.

ಸರ್ಕಾರದಿಂದ ವಿಶೇಷ ಅನುಮತಿ ಸಿಕ್ಕಿದ್ದರೂ ತಾಂತ್ರಿಕ ಅಥವಾ ವಿತರಣಾ ಸಮಸ್ಯೆಯಿಂದ ಈ ಬೆಳವಣಿಗೆ ಸಂಭವಿಸಿರಬಹುದು ಎನ್ನುವ ಚರ್ಚೆ ಜೋರಾಗಿದೆ. ವಿಶೇಷವಾಗಿ ಮುಖ್ಯಮಂತ್ರಿ ವಿಜಯ್ ಈ ಚಿತ್ರಕ್ಕೆ ಮುಂಜಾನೆ ಪ್ರದರ್ಶನಕ್ಕೆ ಅನುಮತಿ ನೀಡಿದ್ದ ಹಿನ್ನೆಲೆ, ಶೋ ರದ್ದಾದ ಘಟನೆ ಈಗ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !