ಹೊಸದಿಗಂತ ವರದಿ ಮಂಗಳೂರು :
ನಗರದ ಹೊರವಲಯ ಉಳ್ಳಾಲ ಕೋಟೆಪುರದ ಫಿಶ್ ಮೀಲ್ ಫ್ಯಾಕ್ಟರಿಯಿಂದ ಮೀನಿನ ಎಣ್ಣೆಯನ್ನು ಹೊತ್ತೊಯ್ಯುತ್ಯಿದ್ದ ಕ್ಯಾಂಟರ್ ನಿಂದ ತಾಂತ್ರಿಕ ದೋಷದಿಂದ ಭಾರೀ ಪ್ರಮಾಣದ ಮೀನಿನ ಎಣ್ಣೆಯು ಉಳ್ಳಾಲದ ರಾಜ ರಸ್ತೆಯಲ್ಲೇ ಸೋರಿಕೆಯಾದ ಪರಿಣಾಮ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಗಾಯಗೊಂಡಿದ್ದು, ಉದ್ರಿಕ್ತ ಸ್ಥಳೀಯರು ಮೀನಿನ ಕ್ಯಾಂಟರನ್ನ ತಡೆದು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ರಾತ್ರಿ ಉಳ್ಳಾಲ ಬೈಲಿನಲ್ಲಿ ನಡೆದಿದೆ.
ಉಳ್ಳಾಲ ಕೋಟೆಪುರದಲ್ಲಿ ನಾಯಿಕೊಡೆಗಳಂತೆ ಫಿಶ್ ಮೀಲ್ ಫ್ಯಾಕ್ಟರಿಗಳು ತಲೆ ಎತ್ತಿದ್ದು ಉಳ್ಳಾಲ ನಗರವನ್ನ ಅನಧಿಕೃತ ಕೈಗಾರಿಕ ಪ್ರದೇಶವನ್ನಾಗಿಸಿದೆ. ಗುರುವಾರ ರಾತ್ರಿ ಕೋಟೆಪುರದಿಂದ ಮಂಗಳೂರು ಬಂದರಿಗೆ ಫಿಶ್ ಮೀಲ್ ಆಯಿಲನ್ನು ಹೊತ್ತೊಯ್ಯುತ್ಯಿದ್ದ ಬೃಹತ್ ಕ್ಯಾಂಟರ್‌ನ ತಾಂತ್ರಿಕ ದೋಷದಿಂದ ಭಾರೀ ಪ್ರಮಾಣದ ಫಿಶ್ ಆಯಿಲ್ ರಸ್ತೆಯಲ್ಲೇ ಸೋರಿಕೆಯಾಗಿದೆ. ಉಳ್ಳಾಲ ಅಬ್ಬಕ್ಕ ಸರ್ಕಲ್ ನಿಂದ ಉಳ್ಳಾಲ ಬೈಲ್ ವರೆಗೂ ಫಿಶ್ ಆಯಿಲ್ ಸೋರಿಕೆಯಾಗಿದ್ದು ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.

ಘಟನೆಯಿಂದ ಉದ್ರಿಕ್ತಗೊಂಡ ಸ್ಥಳೀಯರು ಫಿಶ್ ಮೀಲ್ ಆಯಿಲ್ ಸಾಗಿಸುತ್ತಿದ್ದ ಕ್ಯಾಂಟರನ್ನ ಉಳ್ಳಾಲ ಬೈಲಿನಲ್ಲಿ ಅಡ್ಡ ಹಾಕಿ ತಡೆದು ನಿಲ್ಲಿಸಿ ಪ್ರತಿಭಟಿಸಿದ್ದಾರೆ. ಸುಮಾರು ನಲ್ವತ್ತು ಲಕ್ಷ ರೂಪಾಯಿ ಮೌಲ್ಯದ ಆಯಿಲ್ ಹೊತ್ತೊಯ್ಯುತ್ತಿದ್ದ ಕ್ಯಾಂಟರಿಂದ ಆಯಿಲ್ ಸೋರಿಕೆಯಾಗುತ್ತಲೇ ಇದ್ದು ಆಯಿಲನ್ನು ಬೇರೊಂದು ಕ್ಯಾಂಟರ್ಗೆ ತುಂಬಿಸಲಾಗಿದೆ.
ಘಟನೆಯಿಂದ ಉಳ್ಳಾಲ ಅಬ್ಬಕ್ಕ ಸರ್ಕಲ್ ನಿಂದ ಉಳ್ಳಾಲ ಬೈಲ್ ತನಕ ಏಕ ಮುಖ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಗೊಳಿಸಲಾಗಿದೆ. ರಸ್ತೆಯುದ್ದಕ್ಕೂ ಸೋರಿಕೆಯಾಗಿರುವ ಭಾರೀ ಜಿಡ್ಡಿನ ಫಿಶ್ ಆಯಿಲನ್ನ ಸ್ವಚ್ಚಗೊಳಿಸುವುದೇ ಸವಾಲಾಗಿದ್ದು, ಸ್ಥಳೀಯರು ಮರದ ಮಿಲ್ ಗಳ ಗರಗಸದ ಹುಡಿಯನ್ನ ರಸ್ತೆಗೆ ಚೆಲ್ಲಿ ಮುಂಜಾಗ್ರತಾ ಕ್ರಮ ವಹಿಸಿದ್ದಾರೆ.
ಉಳ್ಳಾಲ ನಗರ ಪ್ರದೇಶದಲ್ಲಿ ತಲೆ ಎತ್ತಿರುವ ಅನಧಿಕೃತ ಫಿಶ್ ಮೀಲ್ ಫ್ಯಾಕ್ಟರಿಗಳಿಂದ ಇಲ್ಲಿನ ಜನರು ದಿನ ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ಫ್ಯಾಕ್ಟರಿಗಳ ತ್ಯಾಜ್ಯ ಸಮುದ್ರಕ್ಕೆ ಬಿಡುವುದರಿಂದ ಜಲಚರಗಳ ಮಾರಣ ಹೋಮ ನಡೆಯುತ್ತಿರುವುದಲ್ಲದೆ, ಫ್ಯಾಕ್ಟರಿಗಳಿಗೆ ದಿನನಿತ್ಯಲೂ ಸಾಗುವ ವಾಹನಗಳು ರಸ್ತೆಗೆ ದುರ್ವಾಸನೆಯುಕ್ತ ಮೀನಿನ ತ್ಯಾಜ್ಯವನ್ನ ಸುರಿಸುತ್ತಿದೆ. ಫ್ಯಾಕ್ಟರಿಗಳಿಂದ ಹೊರ ಸೂಸುವ ದುರ್ನಾತವು ಉಳ್ಳಾಲ ಮಾತ್ರವಲ್ಲದೆ ಸಮೀಪದ ಮಂಗಳಾದೇವಿ ಪರಿಸರಕ್ಕೂ ವ್ಯಾಪಿಸಿದೆ. ಇದೀಗ ಭಾರೀ ಪ್ರಮಾಣದಲ್ಲಿ ರಸ್ತೆಯಲ್ಲಿ ಫಿಶ್ ಮೀಲ್ ಆಯಿಲ್ ಸೋರಿಕೆಯಾಗಿರುವುದರಿಂದ ಇಡೀ ಉಳ್ಳಾಲವೇ ಗಬ್ಬು ನಾರುವಂತಾಗಿದೆ.
ಘಟನೆಗೆ ಕಾರಣವಾದ ಕ್ಯಾಂಟರ್ ವಿರುದ್ಧ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ ರಾಜ ರಸ್ತೆಯಲ್ಲಿ ಫಿಶ್ ಮೀಲ್ ಆಯಿಲ್ ಸೋರಿಕೆಯಾಗಿರುವುದರಿಂದ ದ್ವಿಚಕ್ರ ವಾಹನಗಳು ಜಾರಿ ಬಿದ್ದು ಹಲವರು ಗಾಯಗೊಂಡಿರುವುದಕ್ಕೆ ವಿದಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪ್ರಕರಣಕ್ಕೆ ಸಂಬಂಧಿಸಿದ ಕಂಟೈನರ್ ಹಾಗೂ ಫಿಶ್ ಮೀಲ್ ಫ್ಯಾಕ್ಟರಿ ಮಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಕಮಿಷನರ್ ಅವರಿಗೆ ಸೂಚಿಸಿದ್ದಾರೆ.ಘಟನೆಯಿಂದ ಗಾಯಗೊಂಡವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕಂಟೈನರ್‌ಗೆ ಸಂಬಂಧಿಸಿದ ಫ್ಯಾಕ್ಟರಿ ಮಾಲಕರು ಭರಿಸಬೇಕೆಂದು ಯು.ಟಿ.ಖಾದರ್ ಆದೇಶಿಸಿದ್ದಾರೆ.



