May 16, 2026
Saturday, May 16, 2026
spot_img

SKINCARE | ಸನ್‌ಸ್ಕ್ರೀನ್ ಹಚ್ಚುವಾಗ ಪ್ರತಿಯೊಬ್ಬರೂ ಪಾಲಿಸಲೇಬೇಕಾದ ಎರಡು ಬೆರಳುಗಳ ನಿಯಮ ಏನು?

ಸೌಂದರ್ಯ ಪ್ರಜ್ಞೆ ಉಳ್ಳ ಪ್ರತಿಯೊಬ್ಬರ ಬ್ಯಾಗ್‌ನಲ್ಲೂ ಸನ್‌ಸ್ಕ್ರೀನ್ ಇದ್ದೇ ಇರುತ್ತದೆ. ಆದರೆ, ನಮ್ಮಲ್ಲಿ ಹೆಚ್ಚಿನವರು ಸನ್‌ಸ್ಕ್ರೀನ್ ಅನ್ನು ಕೇವಲ ಬಿಸಿಲಿನಿಂದ ಮುಖ ಕಪ್ಪಾಗುವುದನ್ನು ತಡೆಯಲು ಮಾತ್ರ ಬಳಸುತ್ತಾರೆ. ಆದರೆ ನಿಜ ಹೇಳಬೇಕೆಂದರೆ, ಸನ್‌ಸ್ಕ್ರೀನ್ ಎನ್ನುವುದು ಕೇವಲ ಟ್ಯಾನ್ ನಿವಾರಕವಲ್ಲ. ಅದು ನಿಮ್ಮ ಮುಖದ ಯೌವ್ವನ ಮತ್ತು ಆರೋಗ್ಯವನ್ನು ಕಾಪಾಡುವ ಒಂದು ರಕ್ಷಣಾ ಕವಚ.

ಬಿಸಿಲಿಗೆ ಮುಖ ಒಡ್ಡುವುದರಿಂದ ಅವಧಿಗೂ ಮುನ್ನವೇ ಮೂಡುವ ಸುಕ್ಕುಗಳು, ಕಪ್ಪು ಕಲೆಗಳು ಮತ್ತು ಚರ್ಮದ ಕ್ಯಾನ್ಸರ್‌ನಂತಹ ಗಂಭೀರ ಸಮಸ್ಯೆಗಳನ್ನು ಇದು ತಡೆಯುತ್ತದೆ. ಆದರೆ, ಸನ್‌ಸ್ಕ್ರೀನ್‌ನಿಂದ ಸಂಪೂರ್ಣ ಪ್ರಯೋಜನ ಪಡೆಯಬೇಕಾದರೆ ಅದನ್ನು ಹಚ್ಚುವ ಸರಿಯಾದ ವಿಧಾನ ಮತ್ತು ನಿಯಮಗಳನ್ನು ತಿಳಿಯುವುದು ಅಷ್ಟೇ ಮುಖ್ಯ. ಸನ್‌ಸ್ಕ್ರೀನ್ ಬಳಕೆಯಿಂದ ಮುಖದ ಮೇಲಾಗುವ ಪರಿಣಾಮಗಳ ಮಾಹಿತಿ ಇಲ್ಲಿದೆ.

ಸನ್‌ಸ್ಕ್ರೀನ್ ಬಳಕೆಯ ಪರಿಣಾಮ:

ಸೂರ್ಯನ ಹಾನಿಕಾರಕ ಅಲ್ಟ್ರಾವೈಲೆಟ್ (UVA ಮತ್ತು UVB) ಕಿರಣಗಳು ಚರ್ಮದ ಆಳಕ್ಕೆ ಇಳಿಯದಂತೆ ತಡೆದು, ಮುಖದ ಕೋಶಗಳನ್ನು ರಕ್ಷಿಸುತ್ತದೆ.

ಬಿಸಿಲಿನಿಂದಾಗಿ ಮುಖದಲ್ಲಿ ಅವಧಿಗೂ ಮುನ್ನವೇ ಮೂಡುವ ಸಣ್ಣ ಗೆರೆಗಳು, ಸುಕ್ಕುಗಳು ಮತ್ತು ಚರ್ಮ ಜೋತುಬೀಳುವುದನ್ನು ತಡೆಯುತ್ತದೆ.

ಮುಖದ ಮೇಲಾಗುವ ಕಪ್ಪು ಕಲೆಗಳು, ಪಿಗ್ಮೆಂಟೇಶನ್ ಮತ್ತು ಬಿಸಿಲಿನಿಂದ ಚರ್ಮ ಕಪ್ಪಾಗುವುದನ್ನು ತಡೆದು, ಮುಖದ ನೈಸರ್ಗಿಕ ಬಣ್ಣ ಒಂದೇ ಸಮನಾಗಿ ಇರುವಂತೆ ನೋಡಿಕೊಳ್ಳುತ್ತದೆ.

ಬಿಸಿಲಿನ ತಾಪಕ್ಕೆ ಮುಖದ ಮೇಲಿನ ನೈಸರ್ಗಿಕ ಜಿಡ್ಡು ಒಣಗಿ ಹೋಗದಂತೆ ತಡೆದು, ಚರ್ಮದ ತೇವಾಂಶ ಹಾಗೂ ನಮ್ಯತೆಯನ್ನು ಕಾಪಾಡುತ್ತದೆ.

ದೀರ್ಘಕಾಲ ಸೂರ್ಯನ ಕಿರಣಗಳಿಗೆ ಮುಖ ಒಡ್ಡುವುದರಿಂದ ಉಂಟಾಗಬಹುದಾದ ಚರ್ಮದ ಕ್ಯಾನ್ಸರ್‌ನಂತಹ ಅಪಾಯವನ್ನು ಕಡಿಮೆ ಮಾಡುತ್ತದೆ.

ಸನ್‌ಸ್ಕ್ರೀನ್ ಹಚ್ಚುವ ಸರಿಯಾದ ಕ್ರಮ:

ಮೊದಲು ನಿಮ್ಮ ಮುಖವನ್ನು ಮೃದುವಾದ ಫೇಸ್ ವಾಶ್ ಬಳಸಿ ಸ್ವಚ್ಛವಾಗಿ ತೊಳೆದು, ಒಣಗಿಸಿಕೊಳ್ಳಬೇಕು. ನಂತರ ನಿಮ್ಮ ದಿನನಿತ್ಯದ ಮಾಯಿಶ್ಚರೈಸರ್ ಹಚ್ಚಿದ 2 ನಿಮಿಷಗಳ ನಂತರ ಸನ್‌ಸ್ಕ್ರೀನ್ ಹಚ್ಚಬೇಕು.

ನಿಮ್ಮ ತೋರುಬೆರಳು ಮತ್ತು ಮಧ್ಯದ ಬೆರಳಿನ ಉದ್ದಕ್ಕೆ ಸನ್‌ಸ್ಕ್ರೀನ್ ಲೋಷನ್ ಅನ್ನು ತೆಗೆದುಕೊಳ್ಳಿ. ಇದು ಮುಖ ಮತ್ತು ಕುತ್ತಿಗೆಗೆ ಬೇಕಾಗುವ ಸರಿಯಾದ ಪ್ರಮಾಣವಾಗಿದೆ. ತೆಗೆದುಕೊಂಡ ಸನ್‌ಸ್ಕ್ರೀನ್ ಅನ್ನು ಮುಖ, ಕುತ್ತಿಗೆ, ಕಿವಿ ಮತ್ತು ಕಣ್ಣಿನ ಸುತ್ತ ಸಣ್ಣ ಸಣ್ಣ ಚುಕ್ಕಿಗಳಾಗಿ ಇಟ್ಟುಕೊಂಡು. ಚರ್ಮವನ್ನು ಜೋರಾಗಿ ಉಜ್ಜದೆ, ನಿಧಾನವಾಗಿ ವೃತ್ತಾಕಾರದಲ್ಲಿ ಇಡೀ ಮುಖಕ್ಕೆ ಹರಡಿ, ಅದು ಚರ್ಮದಲ್ಲಿ ಸಂಪೂರ್ಣವಾಗಿ ಹೀರಿಕೊಳ್ಳುವಂತೆ ಮಾಡಬೇಕು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !