ಹಿಂದೂ ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಜ್ಯೇಷ್ಠ ಮಾಸದ ಅಮಾವಾಸ್ಯೆಗೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಆದರೆ, 2026 ರ ಮೇ 16 ರಂದು ಬರುವ ಜ್ಯೇಷ್ಠ ಅಮಾವಾಸ್ಯೆಯು ಕೇವಲ ಸಾಮಾನ್ಯ ದಿನವಲ್ಲ, ಇದು ದೈವಿಕ ಶಕ್ತಿಗಳ ಅಪರೂಪದ ಮಹಾಸಂಯೋಗವಾಗಿದೆ. ಅಂದು ನ್ಯಾಯದೇವನಾದ ಶನಿದೇವರ ಜನ್ಮದಿನವಾದ ‘ಶನಿ ಜಯಂತಿ’ ಆಗಿದ್ದು, ಈ ಪವಿತ್ರ ದಿನವು ಶನಿದೇವನಿಗೆ ಪ್ರಿಯವಾದ ಶನಿವಾರದಂದೇ ಬಂದಿರುವುದರಿಂದ ಇದಕ್ಕೆ ‘ಮಹಾ ಶನಿಚರಿ ಅಮಾವಾಸ್ಯೆ’ ಎಂಬ ವಿಶೇಷ ಗೌರವ ಸಿದ್ಧಿಸಿದೆ.
ಜಾತಕದಲ್ಲಿನ ಸಾಡೇಸಾತಿ, ಶನಿದೋಷಗಳ ಕಠಿಣ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಲು, ಪಿತೃಗಳಿಗೆ ತರ್ಪಣ ನೀಡಿ ಪೂರ್ವಜರ ಆಶೀರ್ವಾದ ಪಡೆಯಲು ಮತ್ತು ಮುತ್ತೈದೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ‘ವಟ ಸಾವಿತ್ರಿ ವ್ರತ’ವನ್ನು ಆಚರಿಸಲು ಈ ದಿನ ಅತ್ಯಂತ ಪ್ರಶಸ್ತವಾಗಿದೆ. ಕರಾವಳಿ ಯೋಗದಂತಿರುವ ಈ ಅಪರೂಪದ ಮಹಾಸಂಯೋಗದ ದಿನದಂದು ಮಾಡುವ ಸಣ್ಣ ದಾನ ಮತ್ತು ಧರ್ಮ ಕಾರ್ಯಗಳು ಕೂಡ ಜೀವನದ ಸಕಲ ಕಷ್ಟಗಳನ್ನು ನಿವಾರಿಸಿ, ನೂರು ಪಟ್ಟು ಪುಣ್ಯಫಲಗಳನ್ನು ತಂದುಕೊಡುತ್ತವೆ ಎಂಬುವ ನಂಬಿಕೆಯಾಗಿದೆ. ಇಂದು ಶನಿಜಯಂತಿ, ಶನಿದೇವನ ಜನ್ಮದಿನವಾಗಿ ಆಚರಿಸಲ್ಪಡುವ ಪ್ರಮುಖ ಹಬ್ಬವಾಗಿದೆ. ಶನಿ ದೋಷ, ಸಾಡೇಸಾತ್ ಇರುವವರು ದೋಷ ನಿವಾರಣೆಗಾಗಿ ಈ ಕೆಲಸಗಳನ್ನು ಮಾಡಿ.
ಇಂದು ಬೆಳಗ್ಗೆ 5:11ಕ್ಕೆ ಆರಂಭವಾಗಿ ಮರುದಿನ 1:30ಕ್ಕೆ ಕೊನೆಗೊಳ್ಳಲಿದೆ. ಶನಿದೋಷ ನಿವಾರಣೆಗೆ ಏನೆಲ್ಲಾ ಮಾಡಬಹುದು?
ಇಂದು ಉಪವಾಸ, ಧ್ಯಾನ ಹಾಗೂ ಪೂಜಾ ವಿಧಿವಿಧಾನಗಳನ್ನು ಮಾಡಬೇಕು.
ಶನಿವಾರದಂದು ಶನಿದೇವರ ದೇಗುಲಕ್ಕೆ ತೆರಳಿ ಸಾಸಿವೆ ಎಣ್ಣೆ, ಎಳ್ಳೆಣ್ಣೆ ಬತ್ತಿ ದೀಪಗಳನ್ನು ದೇವಸ್ಥಾನಗಳಲ್ಲಿ ಹಚ್ಚಬೇಕು.
ತೆಂಗಿನಕಾಯಿಯನ್ನು ಕಪ್ಪು ಹತ್ತಿ ಬಟ್ಟೆಯಿಂದ ಸುತ್ತಿ ನಂತರ ದಾರಗಳನ್ನು ತೆಂಗಿನಕಾಯಿಗೆ ಸುತ್ತಿ. ಇದರ ಜೊತೆ ಪ್ರದಕ್ಷಿಣೆ ಹಾಕಬೇಕು.
ಸಾಸಿವೆ ಎಣ್ಣೆ, ಎಳ್ಳೆಣ್ಣೆ ಅಥವಾ ಎಳ್ಳಿನ ಉಂಡೆಗಳನ್ನು ನೈವೈದ್ಯವಾಗಿ ಇಡಬಹುದು.



