ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ವೈಯಕ್ತಿಕ ಜೀವನವನ್ನು ಮುಕ್ತವಾಗಿ ಹಂಚಿಕೊಳ್ಳುವುದು ಫ್ಯಾಷನ್ ಆಗಿಬಿಟ್ಟಿದೆ. ಆದರೆ, ಜೀವನದಲ್ಲಿ ಯಶಸ್ಸು ಮತ್ತು ನೆಮ್ಮದಿಯನ್ನು ಕಾಣಬೇಕಾದರೆ ಕೆಲವು ವಿಷಯಗಳನ್ನು ಅತ್ಯಂತ ರಹಸ್ಯವಾಗಿಡಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ. ನಿಮ್ಮ ಆಪ್ತರೇ ಆಗಿದ್ದರೂ ಸಹ ಈ ಕೆಳಗಿನ ಸಂಗತಿಗಳನ್ನು ಎಂದಿಗೂ ಬಹಿರಂಗಪಡಿಸಬೇಡಿ.
ನಿಮ್ಮ ಮುಂದಿನ ಬಿಜಿನೆಸ್ ಪ್ಲಾನ್ ಅಥವಾ ಜೀವನದ ಗುರಿಗಳನ್ನು ಸಾಧಿಸುವ ಮೊದಲೇ ಎಲ್ಲರಿಗೂ ಹೇಳಬೇಡಿ. ಇದು ನಿಮ್ಮ ಮೇಲೆ ಅನಗತ್ಯ ಒತ್ತಡವನ್ನು ಸೃಷ್ಟಿಸುತ್ತದೆ ಮತ್ತು ಕೆಲವೊಮ್ಮೆ ಇತರರ ನಕಾರಾತ್ಮಕ ದೃಷ್ಟಿ ನಿಮ್ಮ ಯಶಸ್ಸಿಗೆ ಅಡ್ಡಿಯಾಗಬಹುದು.
ನಿಮ್ಮ ಬಳಿ ಎಷ್ಟು ಹಣವಿದೆ ಅಥವಾ ಎಷ್ಟು ಸಾಲವಿದೆ ಎಂಬುದು ನಿಮ್ಮನ್ನು ಬಿಟ್ಟು ಯಾರಿಗೂ ತಿಳಿಯಬಾರದು. ನಿಮ್ಮ ಆದಾಯ ಹೆಚ್ಚಾಗಿದ್ದರೆ ಜನರು ಅಸೂಯೆ ಪಡಬಹುದು, ಕಡಿಮೆಯಿದ್ದರೆ ನಿಮ್ಮನ್ನು ಕೀಳಾಗಿ ನೋಡಬಹುದು.
ಪ್ರತಿಯೊಂದು ಮನೆಯಲ್ಲೂ ಸಣ್ಣಪುಟ್ಟ ಜಗಳಗಳು ಸಾಮಾನ್ಯ. ಆದರೆ ನಿಮ್ಮ ಮನೆಯ ರಹಸ್ಯಗಳನ್ನು ನಾಲ್ಕನೇ ವ್ಯಕ್ತಿಯ ಮುಂದೆ ಹೇಳಿಕೊಂಡರೆ, ಅವರು ನಿಮ್ಮ ದೌರ್ಬಲ್ಯದ ದುರುಪಯೋಗ ಪಡಿಸಿಕೊಳ್ಳಬಹುದು.
ನಿಮ್ಮಲ್ಲಿರುವ ಭಯ ಅಥವಾ ಮೈನಸ್ ಪಾಯಿಂಟ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಜನರು ನಿಮ್ಮ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ನಿಮ್ಮನ್ನು ಸೋಲಿಸಲು ಬಳಸಿಕೊಳ್ಳಬಹುದು.
ನೀವು ಯಾರಿಗಾದರೂ ಸಹಾಯ ಅಥವಾ ದಾನ ಮಾಡಿದ್ದರೆ ಅದನ್ನು ರಹಸ್ಯವಾಗಿಡಿ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಎಂಬ ಗಾದೆಯಂತೆ, ಸಹಾಯವನ್ನು ಹೇಳಿಕೊಳ್ಳುವುದು ನಿಮ್ಮ ಗೌರವವನ್ನು ಕಡಿಮೆ ಮಾಡುತ್ತದೆ.
ಜೀವನದಲ್ಲಿ ನೆಮ್ಮದಿಯಿಂದ ಇರಲು ‘ಮೌನಂ ಕಲಹ ನಾಸ್ತಿ’ ಎಂಬ ಸೂತ್ರವನ್ನು ಪಾಲಿಸಿ. ನಿಮ್ಮ ರಹಸ್ಯಗಳು ನಿಮ್ಮಲ್ಲೇ ಇದ್ದರೆ ಮಾತ್ರ ನಿಮಗೆ ಸುರಕ್ಷತೆ.



