October 14, 2026
Wednesday, October 14, 2026
spot_img

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಲೊಂಡಾ–ಕ್ಯಾಸಲ್ ರಾಕ್ ರೈಲು ಸಂಚಾರ ಮತ್ತೆ ಆರಂಭವಾಗಲಿದೆ ಎಂದ ಕಾಗೇರಿ

ಹೊಸದಿಗಂತ ವರದಿ ಶಿರಸಿ : ​

ಜೋಯಿಡಾ ಮತ್ತು ಕ್ಯಾಸಲ್ ರಾಕ್ ಭಾಗದ ಸಾರ್ವಜನಿಕರ ಬಹುದಿನಗಳ ಬೇಡಿಕೆ ಈಡೇರಿದ್ದು ಲೊಂಡಾ – ಕ್ಯಾಸಲ್ ರಾಕ್ ನಡುವೆ ರೈಲು ಸಂಚಾರ ಪುನರಾರಂಭವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

​ದ್ವಿಪಥ ಕಾಮಗಾರಿಯ ಕಾರಣದಿಂದಾಗಿ ಭಾಗಶಃ ರದ್ದಾಗಿದ್ದ ಲೊಂಡಾ – ಕ್ಯಾಸಲ್ ರಾಕ್ (LD-CLR) ನಡುವಿನ ರೈಲು ಸೇವೆಯನ್ನು ಪುನರಾರಂಭಿಸಲು ರೈಲ್ವೆ ಸಚಿವಾಲಯದ ನೈರುತ್ಯ ರೈಲ್ವೆ ವಿಭಾಗ ಅಧಿಕೃತ ಆದೇಶ ಹೊರಡಿಸಿದೆ.

​ಕ್ಯಾಸಲ್ ರಾಕ್ ಹಾಗೂ ಜೋಯಿಡಾ ಸುತ್ತಮುತ್ತಲಿನ ಭಾಗದ ಸಾರ್ವಜನಿಕರು ಮತ್ತು ಪ್ರಯಾಣಿಕರು ಎದುರಿಸುತ್ತಿದ್ದ ತೀವ್ರ ತೊಂದರೆಯನ್ನು ಮನಗಂಡು, ರೈಲು ಸಂಚಾರವನ್ನು ಪುನರಾರಂಭಿಸುವಂತೆ ಮಾನ್ಯ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಸಾರ್ವಜನಿಕ ಹಿತದೃಷ್ಟಿಯಿಂದ ಈ ಮನವಿಯನ್ನು ಪುರಸ್ಕರಿಸಿರುವ ರೈಲ್ವೆ ಸಚಿವಾಲಯವು ರೈಲು ಸಂಚಾರಕ್ಕೆ ಅನುಮೋದನೆ ನೀಡಿದೆ.

ಇದನ್ನೂ ಓದಿ:

​ಇದರಂತೆ, 15.8.2026 ರಿಂದ ರೈಲು ಸಂಖ್ಯೆ 17333 (ಮಿರಜ್ – ಕ್ಯಾಸಲ್ ರಾಕ್ ಎಕ್ಸ್‌ಪ್ರೆಸ್) ಲೊಂಡಾ ಬದಲಿಗೆ ನೇರವಾಗಿ ಕ್ಯಾಸಲ್ ರಾಕ್ (CLR) ವರೆಗೆ ಸಂಚರಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 17334 (ಕ್ಯಾಸಲ್ ರಾಕ್ – ಮಿರಜ್ ಎಕ್ಸ್‌ಪ್ರೆಸ್) 15.8.2026 ರಿಂದ ಕ್ಯಾಸಲ್ ರಾಕ್ (CLR) ನಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.

ಕ್ಷೇತ್ರದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿ, ರೈಲು ಸಂಚಾರ ಪುನರಾರಂಭಿಸಲು ಕ್ರಮ ಕೈಗೊಂಡ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೂ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೂಕ್ಷೇತ್ರದ ಜನತೆಯ ಪರವಾಗಿ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿರುವ ಕಾಗೇರಿ ಅವರು, ಕ್ಷೇತ್ರದ ಪ್ರಯಾಣಿಕರು ಹಾಗೂ ಸ್ಥಳೀಯ ಸಾರ್ವಜನಿಕರು ಈ ಪುನರಾರಂಭಗೊಂಡ ರೈಲು ಸೇವೆಯ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ.

Must Read