ಹೊಸದಿಗಂತ ವರದಿ ಅಂಕೋಲಾ:
ಆಕ್ರಮವಾಗಿ ಗೀರ್ ತಳಿಯ ಎತ್ತುಗಳನ್ನು ಸಾಗಿಸುತ್ತಿದ್ದ ಬೊಲೇರೊ ವಾಹನ ಗುಂಡಬಾಳ ಮಂಗನಕಾನದ ಬಳಿ ಪಲ್ಟಿಯಾಗಿದ್ದು ವೆಜಿಟೆಬಲ್ ಕ್ವೀನ್ ಹೆಸರಿನ ವಾಹನದಲ್ಲಿ ಮಂಡಕ್ಕಿ ಚೀಲಗಳನ್ನು ಮೇಲ್ನೋಟಕ್ಕೆ ಕಾಣುವಂತೆ ತುಂಬಿ ಭಾರೀ ಗಾತ್ರದ ಹೋರಿಗಳನ್ನು ವಧಾಲಯಕ್ಕೆ ಸಾಗಿಸುವ ತಂತ್ರಗಾರಿಕೆ ಬೆಳಕಿಗೆ ಬಂದಿದೆ.
ಸಂಶಯ ಮೂಡಿಸಿದ ವಾಹನದ ಭಾರ
ಕೆ.ಎ22 ಎಎ3132 ನೋಂದಣಿ ಸಂಖ್ಯೆಯ ಬೊಲೇರೊ ವಾಹನದಲ್ಲಿ ಮಂಡಕ್ಕಿ ಚೀಲಗಳ ಹಿಂಬದಿಗೆ ಹಿಂಸಾತ್ಮಕ ರೀತಿಯಲ್ಲಿ ಎತ್ತುಗಳನ್ನು ಸಾಗಿಸಲಾಗುತಿತ್ತು. ಬೊಲೇರೊ ವಾಹನ ಮಂಗನಕಾನಬಳಿ ಅಪಘಾತಕ್ಕೀಡಾಗಿ ರಸ್ತೆಯ ಪಕ್ಕಕ್ಕೆ ಸರಿದು ನಿಂತಾಗ ಸಹಾಯಕ್ಕೆ ಬಂದ ಸ್ಥಳೀಯರಿಗೆ ಮಂಡಕ್ಕಿ ತುಂಬಿದೆ ಎನ್ನಲಾದ ವಾಹನದ ಭಾರ ಸಂಶಯ ಮೂಡಿಸಿದ್ದು ಒಳಗಡೆ ಶಬ್ದ ಬರುತ್ತಿರುವುದರಿಂದ ಪರಿಶೀಲನೆ ನಡೆಸಿದಾಗ ಎರಡು ಎತ್ತುಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪಿ.ಎಸ್.ಐ ಗುರುನಾಥ ಹಾದಿಮನಿ ಸ್ದಳಕ್ಕೆ ಭೇಟಿ ನೀಡಿ ವಾಹನ ಮತ್ತು ಆರೋಪಿತರನ್ನು ವಶಕ್ಕೆ ಪಡೆದು ಹೋರಿಗಳನ್ನು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ:
ಬೆಳಗಾವಿಯ ಕಿತ್ತೂರ ನಿವಾಸಿ ಅಪ್ಪಿಸಾಬ್ ಮತ್ತು ಬೈಲಹೊಂಗಲ ನಿವಾಸಿ ಸಚಿನ ಗಡ್ಡೇದ ಬಂಧಿತ ಅರೋಪಿಗಳಾಗಿದ್ದು ವಶಪಡಿಸಿಕೊಂಡ ಗೀರ್ ತಳಿಯ ಹೋರಿಗಳು ಪ್ರತಿ ಹೋರಿ 1 ಟನ್ ಗಿಂತ ಹೆಚ್ಚಿನ ತೂಕ ಹೊಂದಿವೆ.
ಸಂತಾನಾಭಿವೃದ್ಧಿ ಉದ್ದೇಶಕ್ಕೆ ಬಳಸಿ ಕೋಟ್ಯಂತರ ರೂಪಾಯಿ ಹಣಗಳಿಸಿ ಇದೀಗ ವಯಸ್ಸಾಗಿರುವುದರಿಂದ ಕಸಾಯಿಖಾನೆಗೆ ಮಾರಾಟ ಮಾಡಲಾಗಿದ್ದು ಹಿಂಸಾತ್ಮಕವಾಗಿ ಸಾಗಿಸಲಾಗುತಿತ್ತು. ಭಾರೀ ಗಾತ್ರದ ಹೋರಿಗಳನ್ನು ಸ್ಥಳೀಯ ಕೆಲವು ಯುವಕರು ಪೊಲೀಸ್ ಇಲಾಖೆಯ ಸಹಾಯದಲ್ಲಿದ್ದ ಗೃಹರಕ್ಷಕ ಸಿಬ್ಬಂದಿಗಳು ವಾಹನದಿಂದ ಕೆಳಗಡೆ ಇಳಿಸಿ ಸಹಕರಿಸಿದ್ದು, ಪಶುವೈದ್ಯಕೀಯ ಸಂಚಾರಿ ಆಂಬುಲೆನ್ಸ್ ವೈದ್ಯರು ಮತ್ತು ಸಿಬ್ಬಂದಿಗಳು ಗಾಯಗೊಂಡು ಚರ್ಮ ಸುಲಿದ ಸ್ಥಿತಿಯಲ್ಲಿದ್ದ ಹೋರಿಯನ್ನು ಉಪಚರಿಸಿ ಔಷದಿಗಳನ್ನು ನೀಡಿದ್ದು ಗೃಹರಕ್ಷಕ ದಳ ಸಿಬ್ಬಂದಿ ನಿರಂತರವಾಗಿ ನೀರು ನೀಡಿ ದಾಹ ನೀಗಿಸಿದರು.
ಕಾರವಾರ ಅಂಕೋಲಾ ಶಾಸಕ ಸತೀಶ ಸೈಲ್ ಅವರು ಭೇಟಿ ನೀಡಿ ರಕ್ಷಿತ ಹೋರಿಗಳಿಗೆ ಆಹಾರ ನೀಡಿ ಹೋರಿಗಳಿಗೆ ಸರಿಯಾದ ಚಿಕಿತ್ಸೆ ನೀಡಿ ಗುಣಮುಖ ಆದ ನಂತರ ಗೋಶಾಲೆಗೆ ಹಸ್ತಾಂತರ ಮಾಡುವಂತೆ ಸೂಚಿಸಿದರು.



