ಇಡೀ ದಿನದ ಆಯಾಸದ ಬಳಿಕ ರಾತ್ರಿ ಸಿಗುವ ಗಾಢ ನಿದ್ರೆ ದೇಹ ಮತ್ತು ಮನಸ್ಸಿಗೆ ಹೊಸ ಶಕ್ತಿಯನ್ನು ನೀಡುತ್ತದೆ. ಕೇವಲ ಹೆಚ್ಚು ಹೊತ್ತು ಮಲಗುವುದೇ ಸಾಕಾಗುವುದಿಲ್ಲ, ಉತ್ತಮ ಗುಣಮಟ್ಟದ ‘ಡೀಪ್ ಸ್ಲೀಪ್’ ಕೂಡ ಆರೋಗ್ಯಕ್ಕೆ ಬಹಳ ಮುಖ್ಯ. ಈ ಸಮಯದಲ್ಲಿ ದೇಹ ತನ್ನನ್ನು ತಾನೇ ಮರುಸ್ಥಾಪಿಸಿಕೊಳ್ಳುವ ಕೆಲಸ ಮಾಡುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಾರ್ಯ
ಗಾಢ ನಿದ್ರೆಯ ವೇಳೆ ದೇಹದ ಕೋಶಗಳು ಪುನರ್ ನಿರ್ಮಾಣಗೊಳ್ಳುತ್ತವೆ. ಸ್ನಾಯುಗಳ ದುರಸ್ತಿ, ದೇಹದ ಬೆಳವಣಿಗೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಾರ್ಯ ಈ ಹಂತದಲ್ಲಿ ನಡೆಯುತ್ತದೆ. ಆದ್ದರಿಂದ ಸರಿಯಾದ ಡೀಪ್ ಸ್ಲೀಪ್ ಇಲ್ಲದಿದ್ದರೆ ದೇಹದಲ್ಲಿ ಆಯಾಸ ಮತ್ತು ದುರ್ಬಲತೆ ಕಾಣಿಸಬಹುದು.
ಇದನ್ನೂ ಓದಿ:
ಮನಸ್ಸಿನ ಸಮತೋಲನಕ್ಕೆ ಬೆಸ್ಟ್
ಮೆದುಳಿನ ಆರೋಗ್ಯಕ್ಕೂ ಗಾಢ ನಿದ್ರೆ ಅತ್ಯಂತ ಅಗತ್ಯ. ದಿನವಿಡೀ ಸಂಗ್ರಹವಾದ ಮಾಹಿತಿಯನ್ನು ಮೆದುಳು ಈ ಸಮಯದಲ್ಲಿ ಸರಿಯಾಗಿ ವ್ಯವಸ್ಥೆಗೊಳಿಸುತ್ತದೆ. ಇದರಿಂದ ನೆನಪುಶಕ್ತಿ, ಏಕಾಗ್ರತೆ ಮತ್ತು ಮನಸ್ಸಿನ ಸಮತೋಲನ ಉತ್ತಮವಾಗಿರುತ್ತದೆ.
ನಿದ್ರೆ ಕೊರತೆಯಿಂದ ಒತ್ತಡ, ಕಿರಿಕಿರಿ, ತೂಕ ಹೆಚ್ಚಳ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವೂ ಹೆಚ್ಚಬಹುದು. ಆದ್ದರಿಂದ ರಾತ್ರಿ ಸಮಯಕ್ಕೆ ಮಲಗುವುದು, ಮಲಗುವ ಮುನ್ನ ಮೊಬೈಲ್ ಬಳಕೆ ಕಡಿಮೆ ಮಾಡುವುದು ಮತ್ತು ಕ್ಯಾಫಿನ್ ಸೇವನೆ ನಿಯಂತ್ರಿಸುವುದು ಉತ್ತಮ ಗಾಢ ನಿದ್ರೆಗೆ ಸಹಕಾರಿ.



