May 18, 2026
Monday, May 18, 2026
spot_img

ಸೌಹಾರ್ದವಲ್ಲ, ತಾಯಿಯನ್ನೇ ನೆರೆಮನೆಯವಳೆಂದು ನಿಮ್ಮನ್ನು ಯಾಮಾರಿಸಿದ್ದು: ಹೆಬ್ಬಾಳ್ಕರ್ ‘ಶ್ಲಾಘನೆ’ಗೆ ಬಿಜೆಪಿ ಟಕ್ಕರ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನೆರೆಮನೆಯ ಮಹಿಳೆಗೆ ನೆರವಾಗಲು ಎಂದು ​ಉಡುಪಿಯಲ್ಲಿ ತಮ್ಮನ್ನು ಭೇಟಿಯಾಗಲು ಬಂದಿದ್ದ ಮಹಿಳೆ ತನ್ನೊಂದಿಗೆ ಕರೆತಂದಿದ್ದು ತನ್ನ ಸ್ವಂತ ತಾಯಿಯನ್ನೇ ಎಂದು ಸಚಿವೆ ಲಕ್ಮೀ ಹೆಬ್ಬಾಳ್ಕರ್ ಅವರ ‘ಸೌಹಾರ್ದ’ ಟ್ವೀಟ್ ಗೆ ಬಿಜೆಪಿ ಪ್ರತಿಕ್ರಿಯಿಸಿದೆ.

ನೆರೆಮನೆಯ ಮಹಿಳೆ ಎಂದು ಸಮಾಜಕ್ಕೆ ಸುಳ್ಳು ಹೇಳಿ ಸಚಿವರನ್ನು ಯಾಮಾರಿಸಲಾಗಿದ್ದು, ಸಚಿವೆ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದ್ದಾರೆ ಎಂದು ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ನೀತಾ ಪ್ರಭು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ​ಘಟನೆ?

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಮನೆಗೆ ಹಿಂದು ಮಹಿಳೆಯೊಬ್ಬರನ್ನು ಕರೆದುಕೊಂಡು ಬಂದ ಇಬ್ಬರು ಬುರ್ಖಾಧಾರಿ ಮಹಿಳೆಯರು, ತಾವು ಆ ಹಿಂದು ಮಹಿಳೆಯ ನೆರೆಮನೆಯವರೆಂದು ಹೇಳಿಕೊಂಡು ಆ ಬಡ ಮಹಿಳೆಗೆ ಮನೆ ನಿವೇಶನ ನೀಡುವಂತೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಘಟನೆಯ ಸತ್ಯಾಸತ್ಯತೆ ತಿಳಿಯದೆ ಉಡುಪಿ ಬಿಜೆಪಿಗರಿಗೆ ಸೌಹಾರ್ದತೆಯ ಬಗ್ಗೆ ಬಿಟ್ಟಿ ಉಪದೇಶ ನೀಡಿದ್ದರು. ಆದರೆ, ಸಚಿವರನ್ನು ಭೇಟಿಯಾಗಲು ಬಂದಿದ್ದ ಗಿರಿಜಾ ಶೆಟ್ಟಿಗಾರ್ ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವ ಅವರ ಸ್ವಂತ ಪುತ್ರಿಯೇ ಕರೆತಂದಿದ್ದು, ಸಚಿವರ ಮುಂದೆ ಮಾತ್ರ ತಾನು ಹಿಂದು ಮಹಿಳೆಯ ನೆರೆಮನೆಯವಳು ಎಂದು ಸುಳ್ಳು ಹೇಳಿ ಯಾಮಾರಿಸಿರುವುದು ಬಹಿರಂಗವಾಗಿದೆ.

​ಬಿಜೆಪಿ ಮಹಿಳಾ ಮೋರ್ಚಾ ಟೀಕೆ

ಅವಸರ ಬುದ್ಧಿಯ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಿಂದೆ ಮುಂದೆ ಯೋಚಿಸದೇ ಮಾಧ್ಯಮಗಳ ಮುಂದೆ ಉಡುಪಿ ಬಿಜೆಪಿಗರಿಗೆ ಸೌಹಾರ್ದತೆಯ ಭಾಷಣ ಮಾಡಿ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಉಡುಪಿಯ ಜನತೆ ಸೌಹಾರ್ದತೆಯ ಬಗ್ಗೆ ಬೆಳಗಾವಿಯಿಂದ ಬಂದ ಉಸ್ತುವಾರಿ ಸಚಿವರಿಂದ ಕಲಿಯುವ ಅಗತ್ಯವಿಲ್ಲ ಎಂದು ನೀತಾ ಪ್ರಭು ಹೇಳಿದ್ದಾರೆ.

ಬಿಟ್ಟಿ ಪ್ರಚಾರಕ್ಕೆ ಬಿಜೆಪಿಯನ್ನು ಟೀಕಿಸುವುದು ಬಿಡಿ

ಈವರೆಗೆ ಬುರ್ಖಾ ಧರಿಸಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ತರಲು ಮುಂದಾಗಿದ್ದ ಮಹಿಳೆಯರು ಇದೀಗ ಜಿಲ್ಲಾ ಉಸ್ತುವಾರಿ ಸಚಿವರನ್ನೇ ಯಾಮಾರಿಸಿದ್ದಾರೆ. ಸ್ವಂತ ತಾಯಿಯನ್ನೇ ಪ್ರಚಾರಕ್ಕಾಗಿ ನೆರೆಮನೆಯ ಮಹಿಳೆ ಎಂದು ಹೇಳುವ ವ್ಯಕ್ತಿಗಳ ಮನಸ್ಥಿತಿಯನ್ನು ಸಮಾಜ ಗಂಭೀರವಾಗಿ ಪರಿಗಣಿಸಬೇಕಿದೆ ಎಂದ ಅವರು, ಜಿಲ್ಲೆಗೆ ಅತಿಥಿಯಾಗಿ ಆಗಮಿಸಿ ಜಿಲ್ಲೆಯನ್ನು ಸದಾ ನಿರ್ಲಕ್ಷ್ಯ ಮಾಡುವ ಉಸ್ತುವಾರಿ ಸಚಿವರು ತಮ್ಮ ಬಿಟ್ಟಿ ಪ್ರಚಾರಕ್ಕಾಗಿ ಬಿಜೆಪಿ ಪಕ್ಷವನ್ನು ಟೀಕಿಸುವುದನ್ನು ಕೈಬಿಡಬೇಕು ಎಂದು ವ್ಯಂಗ್ಯವಾಡಿದ್ದಾರೆ.

​ಉಡುಪಿ ಜಿಲ್ಲೆಯ 5 ಮಂದಿ ಬಿಜೆಪಿ ಶಾಸಕರು ಹಾಗೂ ಸಂಸದರು ತಮ್ಮ ಬಳಿಗೆ ಬರುವ ನಾಗರಿಕರೊಂದಿಗೆ ಜಾತಿ ಧರ್ಮದ ಭೇದಭಾವ ತೋರಿಲ್ಲ. ಕೇವಲ ರಾಷ್ಟ್ರೀಯತೆಯ ವಿರೋಧಿಗಳು, ಮತೀಯ ಶಕ್ತಿಗಳ ಬಗ್ಗೆ ಎಂದಿಗೂ ರಾಜಿಯಾಗದೇ ಕೆಲಸ ಮಾಡುವ ಬಿಜೆಪಿ ಜನಪ್ರತಿನಿಧಿಗಳ ಬಗ್ಗೆ ಉಡುಪಿಯ ಜನತೆಗೆ ಹೆಮ್ಮೆ ಇದೆ ಎಂದು ನೀತಾ ಪ್ರಭು ತಿಳಿಸಿದ್ದಾರೆ.

​ಉಗ್ರ ಹೋರಾಟದ ಎಚ್ಚರಿಕೆ

ಉಡುಪಿ ಜಿಲ್ಲೆಗೆ ಸದಾ ಅತಿಥಿಯಂತೆ ಆಗಮಿಸಿ, ಜಿಲ್ಲೆಯ ಅಭಿವೃದ್ಧಿಗೆ ಎಳ್ಳು ನೀರು ಬಿಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವರು ಇಂತಹ ಅವಿವೇಕದ ಮಾತುಗಳನ್ನು ಹೇಳಿರುವುದು ಅಕ್ಷಮ್ಯ ಎಂದು ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸಂಧ್ಯಾ ರಮೇಶ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ನಾಯಕರು ಹಾಗೂ ಜನಪ್ರತಿನಿಧಿಗಳ ವಿರುದ್ಧ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ಮುಂದುವರೆಸಿದರೆ ಮಹಿಳಾ ಮೋರ್ಚಾದ ವತಿಯಿಂದ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !