ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಹಲವು ಭಾಗಗಳಲ್ಲಿ ಮುಂಗಾರು ಮತ್ತೆ ಬಿರುಸುಗೊಂಡಿದ್ದು, ಮುಂದಿನ ಕೆಲವು ದಿನಗಳಲ್ಲಿ ಉತ್ತರ, ಮಧ್ಯ, ಪೂರ್ವ ಹಾಗೂ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಈ ರಾಜ್ಯಗಳಿಗೆ ಭಾರೀ ಮಳೆ
ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ದೆಹಲಿ ಸೇರಿದಂತೆ ಹಲವು ಉತ್ತರ ರಾಜ್ಯಗಳಲ್ಲಿ ಜುಲೈ 22ರವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಕೆಲವೆಡೆ ಬಿರುಗಾಳಿ ಹಾಗೂ ಗುಡುಗು-ಮಿಂಚಿನ ಎಚ್ಚರಿಕೆಯೂ ನೀಡಲಾಗಿದೆ.
ಕರ್ನಾಟಕಕ್ಕೂ ಮಳೆ ಮುನ್ಸೂಚನೆ
ಕರಾವಳಿ ಕರ್ನಾಟಕ, ಕೇರಳ ಮತ್ತು ಲಕ್ಷದ್ವೀಪದಲ್ಲಿ ವ್ಯಾಪಕ ಮಳೆಯಾಗಲಿದ್ದು, ಒಳನಾಡು ಕರ್ನಾಟಕ, ತೆಲಂಗಾಣ, ತಮಿಳುನಾಡು ಹಾಗೂ ರಾಯಲಸೀಮಾದಲ್ಲೂ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ:
ಮಧ್ಯ-ಪೂರ್ವ ಭಾರತದಲ್ಲೂ ಅಬ್ಬರ
ಮಧ್ಯಪ್ರದೇಶ, ಛತ್ತೀಸ್‌ಗಢ, ವಿದರ್ಭ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸಹ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಕೆಲವು ಪ್ರದೇಶಗಳಲ್ಲಿ ಮಿಂಚು ಹಾಗೂ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ.
ಮೀನುಗಾರರಿಗೆ ಎಚ್ಚರಿಕೆ
ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ಸಮುದ್ರ ಪ್ರಕ್ಷುಬ್ಧವಾಗುವ ಸಾಧ್ಯತೆ ಇರುವುದರಿಂದ ಜುಲೈ 21ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.



