ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ 63ನೇ ರೋಚಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಹೈದರಾಬಾದ್ ತಂಡವು ಪ್ರಸಕ್ತ ಸಾಲಿನ ಪ್ಲೇ-ಆಫ್ ಹಂತಕ್ಕೆ ಅಧಿಕೃತವಾಗಿ ಅರ್ಹತೆ ಪಡೆದ ಮೊದಲ ತಂಡಗಳಲ್ಲಿ ಒಂದಾಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ಸಿಎಸ್‌ಕೆ ಪರ ಡೆವಾಲ್ಡ್ ಬ್ರೆವಿಸ್ 44 ರನ್ ಬಾರಿಸಿ ಗಮನ ಸೆಳೆದರು. ಆದರೆ, 181 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಆರಂಭಿಕ ಆಟಗಾರ ಇಶಾನ್ ಕಿಶನ್ ಆಸರೆಯಾದರು. ಅವರು ಕೇವಲ 47 ಎಸೆತಗಳಲ್ಲಿ 70 ರನ್ ಚಚ್ಚಿ ತಂಡದ ಗೆಲುವಿನ ಹಾದಿಯನ್ನು ಸುಲಭಗೊಳಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ ಬಿರುಸಿನ ಆಟದ ನೆರವಿನಿಂದ ಸನ್‌ರೈಸರ್ಸ್ 19 ಓವರ್‌ಗಳಲ್ಲೇ 181 ರನ್ ಗಳಿಸಿ ಜಯಭೇರಿ ಬಾರಿಸಿತು. ಈ ಸೋಲಿನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇ-ಆಫ್ ಹಾದಿ ಕಠಿಣವಾಗಿದ್ದು, ಮುಂದಿನ ಪಂದ್ಯಗಳಲ್ಲಿ ಉಳಿದ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.



