May 19, 2026
Tuesday, May 19, 2026
spot_img

ಛತ್ತೀಸ್‌ಗಢದ ‘ಬಸ್ತಾರ್’ ನಕ್ಸಲ್ ಮುಕ್ತ ಪ್ರದೇಶ: ಗೃಹ ಸಚಿವ ಅಮಿತ್ ಶಾ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‌ಗಢದ ಬಸ್ತಾರ್‌ ಇಂದು ಸಂಪೂರ್ಣವಾಗಿ ನಕ್ಸಲ್ ಮುಕ್ತ ಪ್ರದೇಶವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.

ಛತ್ತೀಸ್‌ಗಢದ ಬಸ್ತಾರ್‌ ನಲ್ಲಿ ಕೇಂದ್ರ ವಲಯ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ ನಂತರ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸ್ತಾರ್ ಈಗ ಸಂಪೂರ್ಣವಾಗಿ ನಕ್ಸಲ್ ಮುಕ್ತ ಪ್ರದೇಶವಾಗಿದೆ ಎಂದು ಹೆಮ್ಮೆಯಿಂದ ಹೇಳುವೆ. ಮುಂದಿನ ಐದು ವರ್ಷಗಳಲ್ಲಿ ಈ ಪ್ರದೇಶವು ದೇಶದ ಅತ್ಯಂತ ಅಭಿವೃದ್ಧಿ ಹೊಂದಿದ ಬುಡಕಟ್ಟು ಪ್ರದೇಶವಾಗಿ ಹೊರಹೊಮ್ಮಲಿದೆ ಎಂದು ಭರವಸೆ ನೀಡಿದರು.

ಭದ್ರತಾ ಸಿಬ್ಬಂದಿಯ ತ್ಯಾಗದ ಪ್ರತಿಫಲ

ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಭದ್ರತಾ ಸಿಬ್ಬಂದಿ ಮಾಡಿದ ತ್ಯಾಗಗಳಿಗೆ ಇಂದು ಪ್ರತಿಫಲ ಸಿಕ್ಕಿದೆ. ಇಲ್ಲಿ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಯನ್ನು ತರುವಲ್ಲಿ ನಮ್ಮ ಯೋಧರ ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಅವರು ಹೇಳಿದರು.

ಬೃಹತ್ ಡೈರಿ ನೆಟ್‌ವರ್ಕ್ ಸ್ಥಾಪನೆ

ಬಸ್ತಾರ್‌ನ ಪ್ರತಿಯೊಬ್ಬ ಬುಡಕಟ್ಟು ವ್ಯಕ್ತಿಗೂ ತಲಾ ಒಂದು ಹಸು ಮತ್ತು ಎಮ್ಮೆಯನ್ನು ವಿತರಿಸಲಾಗುವುದು. ಈ ಮೂಲಕ ಶೀಘ್ರದಲ್ಲೇ ಅತ್ಯಂತ ಬೃಹತ್ ಡೈರಿ ನೆಟ್‌ವರ್ಕ್ ಸ್ಥಾಪನೆಯಾಗಲಿದ್ದು, ಹಳ್ಳಿಗಳ ಪ್ರತಿಯೊಂದು ಹನಿ ಹಾಲು ನೇರವಾಗಿ ಕೇಂದ್ರವನ್ನು ತಲುಪುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.

‘ವೀರ ಶಹೀದ್ ಗುಂಡಾಧುರ್ ಸೇವಾ ಡೇರಾ’ ಕೇಂದ್ರಗಳು

ಈ ಹಿಂದೆ ನಕ್ಸಲರನ್ನು ಮಟ್ಟ ಹಾಕಲು ಬರೋಬ್ಬರಿ 200 ಮುಂಚೂಣಿ ಕಾರ್ಯಾಚರಣೆ ನೆಲೆಗಳನ್ನು ಸ್ಥಾಪಿಸಲಾಗಿತ್ತು. ಇದೀಗ ಇಲ್ಲಿ ಸಂಪೂರ್ಣ ಶಾಂತಿ ನೆಲೆಯಾಗಿದ್ದು, ಹೀಗಾಗಿ 200 ಭದ್ರತಾ ಶಿಬಿರಗಳ ಪೈಕಿ 70 ಶಿಬಿರಗಳನ್ನು ಅತ್ಯಾಧುನಿಕ ಸಾರ್ವಜನಿಕ ಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇವುಗಳಿಗೆ ‘ವೀರ ಶಹೀದ್ ಗುಂಡಾಧುರ್ ಸೇವಾ ಡೇರಾ’ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದರು.

ಒಂದೇ ಸೂರಿನಡಿ ಎಲ್ಲಾ ಸೌಲಭ್ಯಗಳು

ಈ 70 ಕೇಂದ್ರಗಳಲ್ಲಿ ಆಧಾರ್ ಸೌಲಭ್ಯಗಳು, ಅಂಗನವಾಡಿಗಳು, ಬ್ಯಾಂಕಿಂಗ್ ಸೇವೆಗಳು, ಕೌಶಲ್ಯಾಭಿವೃದ್ಧಿ ಕೇಂದ್ರಗಳು ಹಾಗೂ ಮಹಿಳೆಯರ ಸ್ವಾವಲಂಬನಾ ಕೇಂದ್ರಗಳನ್ನು ತೆರೆಯಲಾಗುವುದು. ಈ ಮೂಲಕ ಒಂದೇ ಸೂರಿನಡಿ ಎಲ್ಲಾ ಸೌಲಭ್ಯ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !