ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಅನಿಶ್ಚಿತತೆಗಳು ಮತ್ತು ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ ಎಂದು ಸಾರ್ವಜನಿಕ ವಲಯದ ತೈಲ ಕಂಪನಿಗಳು ಸ್ಪಷ್ಟಪಡಿಸಿವೆ.
ಕರ್ನಾಟಕದ ತೈಲ ಉದ್ಯಮದ ರಾಜ್ಯಮಟ್ಟದ ಸಂಯೋಜಕರಾದ ಸಿದ್ದಾರ್ಥ್ ಅಗರ್ವಾಲ್ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಇಂಡಿಯನ್ ಆಯಿಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಕಂಪನಿಗಳು ರಾಜ್ಯದಾದ್ಯಂತ ಇಂಧನ ಪೂರೈಕೆಯನ್ನು ನಿರಂತರವಾಗಿ ನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.
ಪೆಟ್ರೋಲ್ ಬಂಕ್‌ಗಳಲ್ಲಿ ಸರಬರಾಜು ಸುಗಮ
ರಾಜ್ಯದ ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಿತರಣಾ ಕಾರ್ಯಾಚರಣೆಗಳು ಯಾವುದೇ ಅಡಚಣೆ ಇಲ್ಲದೆ ಸಾಮಾನ್ಯವಾಗಿ ಮುಂದುವರಿದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಿಗದಿತ ಸುರಕ್ಷತಾ ಹಾಗೂ ಕಾರ್ಯಾಚರಣಾ ಮಾನದಂಡಗಳಿಗೆ ಅನುಗುಣವಾಗಿ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ.
LPG ವಿತರಣೆ ಸಹಜ ಸ್ಥಿತಿಯಲ್ಲಿ
ರಾಜ್ಯದಾದ್ಯಂತ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಮತ್ತು ವಿತರಣೆ ಸಹಜ ಸ್ಥಿತಿಯಲ್ಲಿದ್ದು, ಗ್ರಾಹಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ LPG ಸರಬರಾಜು ನಿರಂತರವಾಗಿ ನಡೆಯುತ್ತಿದೆ ಎಂದು ಮಾಹಿತಿ ನೀಡಲಾಗಿದೆ.
ಆತಂಕದಿಂದ ಹೆಚ್ಚುವರಿ ಖರೀದಿ ಬೇಡ
ಇಂಧನ ಕೊರತೆ ಉಂಟಾಗುವ ಆತಂಕದಲ್ಲಿ ಜನರು ಅನಗತ್ಯವಾಗಿ ಹೆಚ್ಚುವರಿ ಪ್ರಮಾಣದಲ್ಲಿ ಇಂಧನ ಖರೀದಿಸಬಾರದು ಎಂದು ತೈಲ ಕಂಪನಿಗಳು ಮನವಿ ಮಾಡಿವೆ. ಪ್ಯಾನಿಕ್ ಬೈಯಿಂಗ್‌ನಿಂದ ಕೃತಕ ಒತ್ತಡ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಸಹಜ ಬಳಕೆಯನ್ನು ಮುಂದುವರಿಸಬೇಕು ಎಂದು ಸೂಚಿಸಲಾಗಿದೆ.



