May 21, 2026
Thursday, May 21, 2026
spot_img

ಕೇರಳ ವಿಧಾನಸಭೆಯಲ್ಲಿ ಮೊಳಗಿದ ಕನ್ನಡ: ಕನ್ನಡದಲ್ಲೇ ಪ್ರಮಾಣ ವಚನಗೈದು ಮಿಂಚಿದ ಮಂಜೇಶ್ವರ ಶಾಸಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ವಿಧಾನಸಭೆಯ ನೂತನ ಅಧಿವೇಶನ ಗುರುವಾರ ಆರಂಭಗೊಂಡಿದ್ದು, ಹೊಸ ಶಾಸಕರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ನಡುವೆ ಕನ್ನಡ ಭಾಷೆ ವಿಶೇಷ ಗಮನಸೆಳೆದಿದೆ!

ಕಾಸರಗೋಡು ಜಿಲ್ಲೆಯ ಗಡಿನಾಡು ಕ್ಷೇತ್ರವಾದ ಮಂಜೇಶ್ವರದ ಶಾಸಕ ಎ.ಕೆ.ಎಂ. ಅಶ್ರಫ್, ಕನ್ನಡ ಭಾಷೆಯಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸದನದ ಗಮನ ಸೆಳೆದರು. ಶಾಸಕರ ಭಾಷಾ ಪ್ರೇಮ ಗಡಿನಾಡ ಕನ್ನಡಿಗರಲ್ಲಿ ಹೆಮ್ಮೆ ಮೂಡಿಸಿದೆ. ಜೊತೆಗೆ ಕೇರಳ ರಾಜ್ಯದ ಭಾಗವಾಗಿದ್ದರೂ ಕಾಸರಗೋಡು ಹಾಗೂ ಮಂಜೇಶ್ವರ ಭಾಗಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆ ಇನ್ನೂ ಗಟ್ಟಿಯಾಗಿ ಜೀವಂತವಾಗಿವೆ ಎಂಬ ಸಂದೇಶವನ್ನು ಅವರ ನಡೆ ಸಾರಿದೆ.

ಜಾಲತಾಣಗಳಲ್ಲೂ ಭಾರೀ ಚರ್ಚೆ

ಶಾಸಕ ಅಶ್ರಫ್ ಅವರ ಕನ್ನಡ ಪ್ರಮಾಣ ವಚನ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ. ಕೇರಳ ವಿಧಾನಸಭೆಯಲ್ಲೂ ಕನ್ನಡದ ಧ್ವನಿ ಮೊಳಗಿದೆ ಎಂದು ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಗಡಿನಾಡ ಪ್ರದೇಶದ ಕನ್ನಡಿಗರು ಇದನ್ನು ತಮ್ಮ ಭಾಷಾ ಅಸ್ಮಿತೆಯ ಪ್ರತೀಕ ಎಂದು ಬಣ್ಣಿಸಿದ್ದಾರೆ.

ಕರ್ನಾಟಕ ಗಡಿಭಾಗದಲ್ಲಿರುವ ಮಂಜೇಶ್ವರ ಕ್ಷೇತ್ರದಲ್ಲಿ ಕನ್ನಡ, ತುಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳು ಬಳಕೆಯಲ್ಲಿವೆ. ಆದರೆ ಕನ್ನಡಿಗರ ಪ್ರಭಾವ ಹೆಚ್ಚು ಇರುವುದರಿಂದ ರಾಜಕೀಯ ಹಾಗೂ ಸಾಮಾಜಿಕ ಬದುಕಿನಲ್ಲೂ ಕನ್ನಡಕ್ಕೆ ವಿಶೇಷ ಸ್ಥಾನಮಾನ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !