May 21, 2026
Thursday, May 21, 2026
spot_img

ಬೆಂಗಳೂರಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ: ರಸ್ತೆಗೆ ಉರುಳಿದ ಬೃಹತ್ ಮರಗಳು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ದಿಢೀರ್ ಮಳೆಯಿಂದಾಗಿ ರಸ್ತೆಗಳೆಲ್ಲಾ ಜಲಾವೃತಗೊಂಡಿದೆ.

ಆಲಿಕಲ್ಲು ಸಹಿತ ಧಾರಾಕಾರ ಮಳೆ

ನಗರದ ವಿಜಯನಗರ, ಶಾಂತಿನಗರ, ಲಾಲ್​ಬಾಗ್, ಕಬ್ಬನ್​ಪಾರ್ಕ್​, ಕೆ.ಆರ್.ಮಾರ್ಕೆಟ್, ಜಯನಗರ, ರಾಜಾಜಿನಗರ, ವಿಧಾನಸೌಧ, ಮೈಸೂರು ರಸ್ತೆ, ಮಾಗಡಿ ರಸ್ತೆ, ಬಸವೇಶ್ವರನಗರ, ಮಲ್ಲೇಶ್ವರಂ, ಮೆಜೆಸ್ಟಿಕ್, ವಿಲ್ಸನ್​ಗಾರ್ಡನ್, ಮೆಜೆಸ್ಟಿಕ್​ ಸುತ್ತಮುತ್ತ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದೆ.

ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಕೆರೆಯಂತಾಗಿದ್ದು, ರಸ್ತೆಗಳ ಮೇಲೆ ನೀರು ಮೊಣಕಾಲುದ್ದ ಹರಿಯುತ್ತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಆಟೋ ಚಾಲಕರು ತೀವ್ರ ಪರದಾಡುವಂತಾಗಿದೆ.

ರಸ್ತೆಗೆ ಉರುಳಿದ ಬೃಹತ್ ಮರಗಳು

ನಗರದ ಖನಿಜ ಭವನದ ಮುಂಭಾಗದಲ್ಲಿ ಗಾಳಿಗೆ ಬೃಹತ್‌ ಮರವೊಂದು ರಸ್ತೆಗೆ ದರೆಗುರುಳಿದೆ. ಇದರ ಪರಿಣಾಮವಾಗಿ ರೇಸ್ ಕೋರ್ಸ್ ರಸ್ತೆ ಸುತ್ತಮುತ್ತ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿವೆ.

ಕೆ.ಆರ್. ಸರ್ಕಲ್ ಅಂಡರ್‌ಪಾಸ್ ಸಂಪೂರ್ಣ ಬಂದ್

ಇನ್ನು ಕೆ.ಆರ್. ಸರ್ಕಲ್ ಬಳಿಯ ಅಂಡರ್‌ಪಾಸ್ ಸಂಪೂರ್ಣ ಬಂದ್ ಆಗಿದ್ದು, ವಾಹನ ಸವಾರರು ಟ್ರಾಫಿಕ್ ಜಾಮ್‌ ಸಿಲುಕಿದ್ದಾರೆ. ಕೇವಲ ಅರ್ಧ ಗಂಟೆ ಸುರಿದ ಮಳೆಗೇ ನಗರದ ಹೃದಯಭಾಗ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !