September 26, 2026
Saturday, September 26, 2026
spot_img

ಕೊಲ್ಕತ್ತಾ ಆರ್‌ಜಿ ಕರ್ ಅತ್ಯಾಚಾರ, ಕೊಲೆ ಪ್ರಕರಣ: ಸಿಬಿಐ ನೇತೃತ್ವದಲ್ಲಿ ಮರುತನಿಖೆಗೆ ಹೈಕೋರ್ಟ್ ಆದೇಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ ಸಂಚಲನ ಸೃಷ್ಟಿಸಿದ ಆರ್‌ಜಿ ಕರ್ ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಮೂವರು ಸದಸ್ಯರ ಕೇಂದ್ರೀಯ ತನಿಖಾ ದಳ (ಸಿಬಿಐ) ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಚಿಸಲು ಇಂದು ಹೈಕೋರ್ಟ್ ಆದೇಶ ನೀಡಿದೆ.

ಮೂರು ಸದಸ್ಯರ ಹೊಸ ತನಿಖಾ ತಂಡ

ಪ್ರಕರಣವನ್ನು ಸದ್ದಿಲ್ಲದೆ ಮುಚ್ಚಿಹಾಕಲು ಯತ್ನಿಸಲಾಗಿದೆ, ದೊಡ್ಡ ಪಿತೂರಿಯನ್ನು ನಡೆಸಲಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆ ನ್ಯಾಯಮೂರ್ತಿಗಳಾದ ಶಂಪಾ ಸರ್ಕಾರ್ ಮತ್ತು ತೀರ್ಥಂಕರ್ ಘೋಷ್ ಅವರಿದ್ದ ವಿಭಾಗೀಯ ಪೀಠವು, ಜಂಟಿ ನಿರ್ದೇಶಕರ (ಪೂರ್ವ ವಲಯ) ನೇತೃತ್ವದಲ್ಲಿ ಮೂರು ಸದಸ್ಯರ ಹೊಸ ಸಿಬಿಐ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಆದೇಶಿಸಿದೆ. ಈ ತಂಡವು ತನಿಖೆ ಜೂನ್ 24 ಅಥವಾ 25ರ ಒಳಗಾಗಿ ವಿವರವಾದ ವರದಿಯನ್ನು ಸಲ್ಲಿಸಲು ನಿರ್ದೇಶನ ನೀಡಿದೆ.

ಸಾಕ್ಷ್ಯಗಳ ನಾಶಕ್ಕೆ ದೊಡ್ಡ ಮಟ್ಟದ ಸಂಚು

2024ರಲ್ಲಿ ನಡೆದಆರ್‌ಜಿ ಕರ್ ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಹಲವು ಸಾಕ್ಷ್ಯಗಳನ್ನು ನಾಶಪಡಿಸಲು ದೊಡ್ಡ ಮಟ್ಟದ ಸಂಚು ನಡೆದಿದೆ ಎಂದು ಮೃತ ಯುವ ವೈದ್ಯೆಯ ಪೋಷಕರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಅಪರಾಧದ ಸ್ವರೂಪ ಮತ್ತು ಸಾಮಾಜಿಕ ಹಿತಾಸಕ್ತಿಯನ್ನು ಪರಿಗಣಿಸಿ ಮರುತನಿಖೆಯ ಆದೇಶ ನೀಡಿದೆ.

Must Read