August 28, 2026
Friday, August 28, 2026
spot_img

ಮೊಬೈಲ್‌ನ್ನು ಕಪಾಟಿನಲ್ಲಿ ಲಾಕ್‌ ಮಾಡಿದ ತಂದೆ: ಬೇಸರದಲ್ಲಿ ಮನೆ ಬಿಟ್ಟ ಮೂವರು ಮಕ್ಕಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಆನ್‌ಲೈನ್ ಗೇಮ್ ‘ಫ್ರೀ ಫೈರ್’ ಆಡುವುದನ್ನು ತಂದೆ ತಡೆದಿದ್ದಕ್ಕೆ ಕೋಪಗೊಂಡ ಮೂವರು ಅಪ್ರಾಪ್ತ ವಯಸ್ಕ ಮಕ್ಕಳು, ಮನೆಯಲ್ಲಿದ್ದ 15,000 ರೂ. ಹಣದೊಂದಿಗೆ ಓಡಿಹೋಗಿರುವ ಆಘಾತಕಾರಿ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ. ನಾಪತ್ತೆಯಾಗಿರುವ ಈ ಮಕ್ಕಳು ಸದ್ಯ ಮುಂಬೈಗೆ ಹೋಗುವ ರೈಲು ಹತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೊಬೈಲ್ ಗೇಮ್‌ಗೆ ದಾಸರಾಗಿದ್ದ ಮಕ್ಕಳು
ನಾಪತ್ತೆಯಾದವರಲ್ಲಿ 14 ವರ್ಷದ ಹುಡುಗ, ಆತನ 11 ವರ್ಷದ ತಮ್ಮ ಮತ್ತು 9 ವರ್ಷದ ತಂಗಿ ಸೇರಿದ್ದಾರೆ. ಸೂರತ್‌ನ ಜವಳಿ ಉದ್ಯಮದಲ್ಲಿ ಕಾರ್ಮಿಕರಾಗಿರುವ ಇವರ ತಂದೆ, ಕಳೆದ ತಿಂಗಳ ಕೊನೆಯಲ್ಲಿ ತಮ್ಮ ಊರಿಗೆ ಹೋಗುವಾಗ ಆಕಸ್ಮಿಕವಾಗಿ ಮೊಬೈಲ್ ಫೋನ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರು. ತಂದೆ ಇಲ್ಲದ ಸಮಯದಲ್ಲಿ ಈ ಮೂರೂ ಮಕ್ಕಳು ತಂದೆಯ ಮೊಬೈಲ್‌ನಲ್ಲಿ ಜನಪ್ರಿಯ ಬ್ಯಾಟಲ್ ಗೇಮ್ ‘ಗರೆನಾ ಫ್ರೀ ಫೈರ್’ ಅನ್ನು ಗಂಟೆಗಟ್ಟಲೆ ಆಡಿ, ಅದಕ್ಕೆ ತೀವ್ರವಾಗಿ ಅಡಿಕ್ಟ್ ಆಗಿದ್ದರು.

ಸಿಮ್ ಕಾರ್ಡ್ ತೆಗೆದು ಬೀಗ ಹಾಕಿದ್ದ ತಂದೆ
ತಂದೆ ಊರಿನಿಂದ ವಾಪಸ್ ಬಂದಾಗ, ತಾಯಿ ಮಕ್ಕಳ ಮೊಬೈಲ್ ಚಟದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಮಕ್ಕಳ ಗೇಮಿಂಗ್ ಹವ್ಯಾಸಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ ತಂದೆ, ಘಟನೆ ನಡೆಯುವ ಮೂರು ದಿನಗಳ ಮುಂಚೆ ಮೊಬೈಲ್‌ನಿಂದ ಸಿಮ್ ಕಾರ್ಡ್ ತೆಗೆದು, ಫೋನ್ ಅನ್ನು ಕಪಾಟಿನಲ್ಲಿಟ್ಟು ಬೀಗ ಹಾಕಿದ್ದರು. ಅಲ್ಲದೆ ಮಕ್ಕಳಿಗೆ ಬುದ್ಧಿವಾದ ಹೇಳಿ ಬೈದಿದ್ದರು. ಇದರಿಂದ ತೀವ್ರ ಕೋಪಗೊಂಡ ಮಕ್ಕಳು ಮೇ 19 ರಂದು ಮುಂಜಾನೆ ಇಡೀ ಕುಟುಂಬ ನಿದ್ರಿಸುತ್ತಿದ್ದಾಗ ಮನೆಯಿಂದ ಓಡಿಹೋಗಿದ್ದಾರೆ. ಹೋಗುವಾಗ ಮನೆಯಲ್ಲಿದ್ದ 15,000 ರೂ. ಹಣವನ್ನು ಮತ್ತು ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಮುಂಬೈನಲ್ಲಿ ತನಿಖೆ: ಸಿಸಿಟಿವಿಯಲ್ಲಿ ಮಕ್ಕಳು ಸುರಕ್ಷಿತ
ಮಕ್ಕಳು ನಾಪತ್ತೆಯಾದ ತಕ್ಷಣ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಡಿ. ರಾಥೋಡ್, ಮಕ್ಕಳನ್ನು ಪತ್ತೆ ಹಚ್ಚಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಐದು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮಕ್ಕಳು ಮುಂಬೈ ರೈಲು ಹತ್ತಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಲಭ್ಯವಿರುವ ಸಿಸಿಟಿವಿ ದೃಶ್ಯಗಳಲ್ಲಿ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಶೀಘ್ರದಲ್ಲೇ ಅವರನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !