ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ, ಮಾಡೆಲ್ ತ್ವಿಶಾ ಶರ್ಮಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪರಾರಿಯಾಗಿದ್ದ ಪತಿ ಸಮರ್ಥ್ ಸಿಂಗ್ ಶುಕ್ರವಾರ ಸಂಜೆ ಜಬಲ್ಪುರ ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಲು ಆಗಮಿಸಿದ್ದಾರೆ.
10 ದಿನಗಳಿಂದ ಮಿಸ್ಸಿಂಗ್
ಕಳೆದ 10 ದಿನಗಳಿಂದ ತಲೆಮರೆಸಿಕೊಂಡಿದ್ದ ಸಮರ್ಥ್ ಸಿಂಗ್ ಇಂದು ತ್ವಿಶಾ ಶರ್ಮಾ ಅವರ ಶವದ ಎರಡನೇ ಮರಣೋತ್ತರ ಪರೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ನ್ಯಾಯಾಲಯಕ್ಕೆ ಬಂದು ಶರಣಾಗಿದ್ದಾರೆ.
ಸಮರ್ಥ್ ಸಿಂಗ್ ತಾಯಿಗೂ ನೊಟೀಸ್ ಜಾರಿ
ಇದೇ ವೇಳೆ, ಪ್ರಕರಣದಲ್ಲಿ ಸಮರ್ಥ್ ಸಿಂಗ್ ಅವರ ತಾಯಿ, ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರಿಗೆ ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ ನೊಟೀಸ್ ಜಾರಿಗೊಳಿಸಿದೆ. ಅವರ ವಯಸ್ಸು ಮತ್ತು ಹಳೆಯ ಹುದ್ದೆಯನ್ನು ಪರಿಗಣಿಸಿ ಭೋಪಾಲ್ ಸೆಷನ್ಸ್ ನ್ಯಾಯಾಲಯವು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಆದರೆ ಆರೋಪಿಗೆ ಜಾಮೀನು ನೀಡಿರುವುದನ್ನು ವಿರೋಧಿಸಿ ತ್ವಿಶಾ ತಂದೆ ಮಧ್ಯಪ್ರದೇಶ ಹೈಕೋರ್ಟ್‌ನ ಜಬಲ್‌ಪುರ್ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ನೊಟೀಸ್ ಜಾರಿ ಮಾಡಿದೆ.
ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದ ತ್ವಿಶಾ ಶರ್ಮಾ
33 ವರ್ಷದ ತ್ವಿಶಾ ಶರ್ಮಾ ಮೇ 12ರಂದು ಭೋಪಾಲ್‌ನಲ್ಲಿರುವ ತನ್ನ ಪತಿಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಮಗಳ ಸಾವಿನಿಂದ ಕಂಗಾಲಾಗಿರುವ ತ್ವಿಶಾ ಕುಟುಂಬಸ್ಥರು, ಇದು ಆತ್ಮಹತ್ಯೆಯಲ್ಲ, ಇದರ ಹಿಂದೆ ಪತಿ ಮತ್ತು ಅತ್ತೆಯ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಸಿಂಗ್ ಕುಟುಂಬಸ್ಥರು, ‘ತ್ವಿಶಾ ಮಾದಕ ವ್ಯಸನಕ್ಕೆ ಒಳಗಾಗಿದ್ದಳು, ಅದೇ ಆಕೆಯ ಸಾವಿಗೆ ಕಾರಣ’ ಎಂಬ ವಾದಿಸಿದ್ದರು.



