May 22, 2026
Friday, May 22, 2026
spot_img

ತ್ವಿಶಾ ಶರ್ಮಾ ಸಾವಿನ ಪ್ರಕರಣ: ಎರಡನೇ ಮರಣೋತ್ತರ ಪರೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ ಅನುಮತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ, ಮಾಡೆಲ್​ ತ್ವಿಶಾ ಶರ್ಮಾ ಸಾವಿನ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಇಂದು ಮಹತ್ವದ ಆದೇಶ ನೀಡಿದ್ದು, ಏಮ್ಸ್ ದೆಹಲಿ ವೈದ್ಯರ ತಂಡದಿಂದ ಎರಡನೇ ಮರಣೋತ್ತರ ಪರೀಕ್ಷೆಗೆ ಆದೇಶಿಸಿದೆ.

ದಾಖಲೆ ಒದಗಿಸುವಲ್ಲಿ ವಿಫಲ

ಭೋಪಾಲ್ ನ್ಯಾಯಾಲಯವು, ತ್ವಿಶಾ ಶರ್ಮಾ ಅವರ ಎರಡನೇ ಮರಣೋತ್ತರ ಪರೀಕ್ಷೆ ನಡೆಸುವಂತೆ ಕೇಳಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಸಂಬಂಧ ಕುಟುಂಬ ಸದಸ್ಯರು ಎರಡನೇ ಶವಪರೀಕ್ಷೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ನೇಣು ಬಿಗಿದ ಬೆಲ್ಟ್ ಅನ್ನು ತನಿಖಾಧಿಕಾರಿಗಳು ಒದಗಿಸಲು ವಿಫಲರಾಗಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ತ್ವಿಶಾ ಅವರ ದೇಹದ ಮೇಲೆ ಕಂಡುಬಂದ ಗಾಯಗಳ ಬಗ್ಗೆ ವಿವರವಾದ ಉಲ್ಲೇಖವಿಲ್ಲದಿರುವ ಬಗ್ಗೆ ಅವರ ವಕೀಲರು ಕಳವಳ ವ್ಯಕ್ತಪಡಿಸಿದ್ದರು.

ಈ ಸಂಬಂಧ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಾವಿನ ಹಿಂದಿನ ನೈಜ ಕಾರಣವನ್ನು ಮತ್ತು ಸತ್ಯಾಂಶವನ್ನು ಹೊರತರಲು ದೆಹಲಿಯ ಅತ್ಯುನ್ನತ ವೈದ್ಯಕೀಯ ಸಂಸ್ಥೆಯಾದ ಏಮ್ಸ್ ತಜ್ಞ ವೈದ್ಯರ ಮಂಡಳಿಯ ಮೂಲಕ ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಲು ಅನುಮತಿ ನೀಡಿದೆ.

ಶೀಘ್ರವೇ ಶವಪರೀಕ್ಷೆ ನಡೆಸಲು ಸೂಚನೆ

ಭೋಪಾಲ್ ಏಮ್ಸ್‌ನ ಶವಾಗಾರದಲ್ಲಿ ಮೈನಸ್ 4 ಡಿಗ್ರಿ ಸೆಲ್ಸಿಯಸ್‌ನಲ್ಲಿ ತ್ವಿಶಾ ಶರ್ಮಾ ಅವರ ದೇಹವನ್ನು ಇರಿಸಲಾಗಿದೆ. ಆದರೆ ಹೆಚ್ಚಿನ ಸಮಯದವರೆಗೆ ಸಂರಕ್ಷಿಸಲು ಮೈನಸ್ 80 ಡಿಗ್ರಿ ಸೆಲ್ಸಿಯಸ್ ಅಗತ್ಯವಿದೆ. ಹೀಗಾಗಿ ಬೇಗನೇ ಶವಪರೀಕ್ಷೆ ನಡೆಸಿ ಎಂದು ಸೂಚಿಸಿದೆ.

ಮೇ 12ರಂದು ಭೋಪಾಲ್‌ನಲ್ಲಿರುವ ಅವರ ಗಂಡನ ಮನೆಯಲ್ಲಿ ತ್ವಿಶಾ ಶರ್ಮಾ ಶವವಾಗಿ ಪತ್ತೆಯಾಗಿದ್ದರು. ನಂತರ ಪೊಲೀಸರು, ಅವರ ಪತಿ ವಕೀಲ ಸಮರ್ಥ್ ಸಿಂಗ್ ಮತ್ತು ಅತ್ತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ವಿರುದ್ಧ ವರದಕ್ಷಿಣೆ ಸಾವು ಮತ್ತು ಕಿರುಕುಳ ಆರೋಪಗಳಡಿ ಎಫ್‌ಐಆರ್ ದಾಖಲಿಸಿದ್ದರು.

ತಲೆಮರೆಸಿಕೊಂಡ ಪತಿ

ತ್ವಿಶಾ ಶರ್ಮಾ ಅವರ ಪತಿ ಸಮರ್ಥ್ ಸಿಂಗ್ ತಲೆಮರೆಸಿಕೊಂಡಿದ್ದು, ಅವರನ್ನು ಹಿಡಿಯಲು ಪೊಲೀಸರು ಬಹುಮಾನ ಘೋಷಿಸಿದ್ದಾರೆ. ಈ ಮಧ್ಯೆ ಸಮರ್ಥ್ ಸಿಂಗ್ ಶೀಘ್ರದಲ್ಲೇ ಪೊಲೀಸರಿಗೆ ಶರಣಾಗಲಿದ್ದಾರೆ ಎಂದು ಅವರ ವಕೀಲರು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !