ಸುಂದರವಾದ, ದಟ್ಟವಾದ ಮತ್ತು ರೇಷ್ಮೆಯಂತಹ ಮೃದುವಾದ ಕೂದಲು ಪ್ರತಿಯೊಬ್ಬರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಇಂದಿನ ಮಾಲಿನ್ಯ, ಧೂಳು, ಹವಾಮಾನ ಬದಲಾವಣೆ ಮತ್ತು ಕೆಮಿಕಲ್ ಯುಕ್ತ ಉತ್ಪನ್ನಗಳ ಅತಿಯಾದ ಬಳಕೆಯಿಂದಾಗಿ ಹೆಚ್ಚಿನವರು ರಫ್ ಮತ್ತು ಡ್ರೈ ಹೇರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂದಲು ಒಣಗಿದಾಗ ಅದು ಜೀವವಿಲ್ಲದಂತೆ ಕಾಣುವುದಲ್ಲದೆ, ಅತಿಯಾಗಿ ತುಂಡಾಗಲು ಮತ್ತು ಉದುರಲು ಆರಂಭವಾಗುತ್ತದೆ. ಹಾಗಾದರೆ, ಯಾವುದೇ ದುಬಾರಿ ಪಾರ್ಲರ್ ಟ್ರೀಟ್ಮೆಂಟ್ ಇಲ್ಲದೆ ಮನೆಯಲ್ಲೇ ಕೂದಲಿನ ತೇವಾಂಶವನ್ನು ಮರಳಿ ಪಡೆಯುವುದು ಹೇಗೆ? ಒಣ ಕೂದಲನ್ನು ಪೋಷಿಸಿ, ಅದನ್ನು ಹೊಳೆಯುವಂತೆ ಮಾಡುವ ಸರಳ ಮನೆಮದ್ದುಗಳು ಮತ್ತು ಆರೈಕೆಯ ಬಗ್ಗೆ ತಿಳಿಯೋಣ.
ನ್ಯಾಚುರಲ್ ಹೇರ್ ಪ್ಯಾಕ್ಗಳು
ಮೊಸರು ಮತ್ತು ಜೇನುತುಪ್ಪ
ಅರ್ಧ ಕಪ್ ಗಟ್ಟಿ ಮೊಸರಿಗೆ 2 ಚಮಚ ಜೇನುತುಪ್ಪ ಮತ್ತು 1 ಚಮಚ ಆಲಿವ್ ಎಣ್ಣೆ ಸೇರಿಸಿ ಮಿಶ್ರಣ ಮಾಡಿ. ಇದನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ 30 ನಿಮಿಷಗಳ ಬಳಿಕ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.
ಬಾಳೆಹಣ್ಣು ಮತ್ತು ಜೇನುತುಪ್ಪ:
ಚೆನ್ನಾಗಿ ಹಣ್ಣಾದ ಒಂದು ಬಾಳೆಹಣ್ಣನ್ನು ನುಣ್ಣಗೆ ಪೇಸ್ಟ್ ಮಾಡಿ, ಅದಕ್ಕೆ 2 ಚಮಚ ತೆಂಗಿನ ಎಣ್ಣೆ ಮತ್ತು 1 ಚಮಚ ಜೇನುತುಪ್ಪ ಸೇರಿಸಿ. ಇದನ್ನು ಕೂದಲಿಗೆ ಹಚ್ಚಿ 20 ನಿಮಿಷ ಬಿಟ್ಟು ಶಾಂಪೂ ಮಾಡಿದರೆ ಕೂದಲಿನ ಡ್ರೈನೆಸ್ ಅನ್ನು ತಕ್ಷಣವೇ ಕಡಿಮೆ ಮಾಡುತ್ತದೆ.
ಇದನ್ನೂ ಓದಿ:
ಅಲೋವೆರಾ ಮತ್ತು ತೆಂಗಿನ ಎಣ್ಣೆ:
ತಾಜಾ ಅಲೋವೆರಾ ಜೆಲ್ ಮತ್ತು ತೆಂಗಿನ ಎಣ್ಣೆಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. 45 ನಿಮಿಷಗಳ ನಂತರ ಮೈಲ್ಡ್ ಶಾಂಪೂ ಬಳಸಿ ತೊಳೆಯಬೇಕು.
ಕೆಲವು ಹೇರ್ ಕೇರ್ ಟಿಪ್ಸ್:
ಕೂದಲನ್ನು ತೊಳೆಯಲು ಎಂದಿಗೂ ಅತಿಯಾದ ಬಿಸಿ ನೀರನ್ನು ಬಳಸಬಾರದು. ಇದು ಕೂದಲಿನ ನೈಸರ್ಗಿಕ ಎಣ್ಣೆಯನ್ನು ಸಂಪೂರ್ಣವಾಗಿ ಒಣಗಿಸಿಬಿಡುತ್ತದೆ. ಯಾವಾಗಲೂ ಉಗುರುಬೆಚ್ಚಗಿನ ಅಥವಾ ತಣ್ಣನೆಯ ನೀರನ್ನು ಬಳಸಬೇಕು.
ಕಠಿಣವಾದ ಕೆಮಿಕಲ್ ಇರುವ ಶಾಂಪೂಗಳ ಬದಲಿಗೆ ಸಲ್ಫೇಟ್ ಮುಕ್ತ ಅಥವಾ ಆಯುರ್ವೇದ ಶಾಂಪೂಗಳನ್ನು ಬಳಸಿ. ವಾರಕ್ಕೆ 2 ಬಾರಿಗಿಂತ ಹೆಚ್ಚು ಶಾಂಪೂ ಮಾಡಬಾರದು.
ಶಾಂಪೂ ಮಾಡಿದ ಪ್ರತಿ ಬಾರಿಯೂ ಕೂದಲಿನ ಮಧ್ಯಭಾಗದಿಂದ ತುದಿಯವರೆಗೆ ಕಂಡೀಷನರ್ ಹಚ್ಚಿ 2 ನಿಮಿಷ ಬಿಟ್ಟು ತೊಳೆಯಬೇಕು. ಇದು ಕೂದಲಿನ ತೇವಾಂಶವನ್ನು ಕಾಪಾಡುತ್ತದೆ.
ಹೇರ್ ಡ್ರೈಯರ್, ಸ್ಟ್ರೈಟನಿಂಗ್ ಮೆಷಿನ್ಗಳ ಅತಿಯಾದ ಬಳಕೆಯನ್ನು ನಿಲ್ಲಿಸಬೇಕು. ಇವು ಕೂದಲನ್ನು ಮತ್ತಷ್ಟು ಒರಟಾಗಿಸುತ್ತವೆ.



