ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಕ್ರೀದ್ ಹಬ್ಬಕ್ಕೂ ಮುನ್ನ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗಳು ತೀವ್ರಗೊಂಡಿವೆ. ಹೊಸ ಬಿಜೆಪಿ ಸರ್ಕಾರ ಬಕ್ರೀದ್‌ಗೆ ನೀಡಲಾಗಿದ್ದ ಎರಡು ದಿನಗಳ ಸರ್ಕಾರಿ ರಜೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸಿದರೆ, ಮತ್ತೊಂದೆಡೆ ಪ್ರಾಣಿ ಬಲಿ ಕುರಿತ ಕಠಿಣ ನಿಯಮಗಳಿಗೆ ಕಲ್ಕತ್ತಾ ಹೈಕೋರ್ಟ್ ಬೆಂಬಲ ನೀಡಿದೆ. ಈ ಎರಡೂ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿವೆ.
ರಜಾ ಪಟ್ಟಿಯಲ್ಲಿ ಬದಲಾವಣೆ
ರಾಜ್ಯ ಹಣಕಾಸು ಇಲಾಖೆ ಬಿಡುಗಡೆ ಮಾಡಿದ ಪರಿಷ್ಕೃತ ಅಧಿಸೂಚನೆಯ ಪ್ರಕಾರ, ಈ ಹಿಂದೆ ಮೇ 26 ಮತ್ತು 27 ರಂದು ಘೋಷಿಸಲಾಗಿದ್ದ ರಜೆಯನ್ನು ರದ್ದುಗೊಳಿಸಲಾಗಿದೆ. ಈ ವರ್ಷ ಬಕ್ರೀದ್ ಆಚರಣೆ ಮೇ 28 ರಂದು ನಡೆಯಲಿರುವ ಹಿನ್ನೆಲೆಯಲ್ಲಿ, ಆ ದಿನವನ್ನು ಮಾತ್ರ ಅಧಿಕೃತ ಸರ್ಕಾರಿ ರಜೆ ಎಂದು ಘೋಷಿಸಲಾಗಿದೆ. ಉಳಿದ ಎರಡು ದಿನಗಳು ಸರ್ಕಾರಿ ಕಚೇರಿಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸಾಮಾನ್ಯ ಕಾರ್ಯದಿನಗಳಾಗಿರಲಿವೆ.
ಇದನ್ನೂ ಓದಿ:
ಪ್ರಾಣಿ ಬಲಿ ಕುರಿತ ಹೈಕೋರ್ಟ್ ಅಭಿಪ್ರಾಯ
ಇದೇ ವೇಳೆ ಬಕ್ರೀದ್ ಸಂದರ್ಭದಲ್ಲಿ ಪ್ರಾಣಿ ಬಲಿ ನಿಯಂತ್ರಣಕ್ಕೆ ಸರ್ಕಾರ ಜಾರಿಗೆ ತಂದಿರುವ ಮಾರ್ಗಸೂಚಿಗಳಿಗೆ ಕಲ್ಕತ್ತಾ ಹೈಕೋರ್ಟ್ ಬೆಂಬಲ ನೀಡಿದೆ. 14 ವರ್ಷಕ್ಕಿಂತ ಮೇಲ್ಪಟ್ಟ ಪ್ರಾಣಿಗಳಿಗೆ ಮಾತ್ರ ಬಲಿ ಅನುಮತಿ ನೀಡಲಾಗಿದ್ದು, ಪಶುವೈದ್ಯರು ಹಾಗೂ ಸ್ಥಳೀಯ ಆಡಳಿತದ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗೋಹತ್ಯೆ ನಿಷೇಧಿಸಿರುವ ಕ್ರಮಕ್ಕೂ ಕೋರ್ಟ್ ತಡೆ ನೀಡಲು ನಿರಾಕರಿಸಿದೆ.
ಗೋಮಾಂಸ ದರ ಏರಿಕೆ
ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳಿಂದ ಮಾರುಕಟ್ಟೆಯ ಮೇಲೂ ಪರಿಣಾಮ ಕಾಣಿಸಿಕೊಂಡಿದೆ. ಕೋಲ್ಕತ್ತಾದಲ್ಲಿ ಗೋಮಾಂಸದ ಬೆಲೆ ದಿಢೀರ್ ಏರಿಕೆಯಾಗಿದ್ದು, ಕೆಲವೆಡೆ ಕೆಜಿಗೆ 600 ರೂಪಾಯಿವರೆಗೆ ತಲುಪಿದೆ ಎಂದು ವರದಿಗಳು ತಿಳಿಸಿವೆ.



