ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಜಿಲಾಕರ್ ಸೇವೆಯ ಹೆಸರಿನಲ್ಲಿ ನಕಲಿ ವೆಬ್ಸೈಟ್ವೊಂದು ಸಕ್ರಿಯವಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಎಚ್ಚರಿಕೆ ನೀಡಿದೆ.
ಸೈಬರ್ ವಂಚಕರು ಜನರನ್ನು ದಾರಿತಪ್ಪಿಸಲು ಡಿಜಿಲಾಕರ್ ಮತ್ತು ಶಿಕ್ಷಣ ಮಂಡಳಿಗಳ ಸೇವೆಗಳ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದಾಗಿ ತಿಳಿಸಲಾಗಿದೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಇಲಾಖೆ, ನಕಲಿ ವೆಬ್ಸೈಟ್ ಲಿಂಕ್ವೊಂದನ್ನು ಉಲ್ಲೇಖಿಸಿ, ಯಾವುದೇ ಕಾರಣಕ್ಕೂ ವೈಯಕ್ತಿಕ ಮಾಹಿತಿ, ಆಧಾರ್ ಸಂಖ್ಯೆ, ಒಟಿಪಿ ಅಥವಾ ಬ್ಯಾಂಕಿಂಗ್ ಮತ್ತು ಪಾವತಿ ವಿವರಗಳನ್ನು ಹಂಚಿಕೊಳ್ಳಬಾರದು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದೆ.
ನಕಲಿ ಲಿಂಕ್ ಮೂಲಕ ಮಾಹಿತಿ ಕಳವು ಆತಂಕ
ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (CISCE) ಮತ್ತು ಡಿಜಿಲಾಕರ್ ಸೇವೆಗಳನ್ನು ಒದಗಿಸುವುದಾಗಿ ಹೇಳಿಕೊಂಡು ನಕಲಿ ತಾಣವನ್ನು ಸೃಷ್ಟಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಗುರಿಯಾಗಿಸಿಕೊಂಡು ಈ ರೀತಿಯ ಮೋಸದ ಪ್ರಯತ್ನಗಳು ನಡೆಯುತ್ತಿರುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಹೀಗಾಗಿ ಡಿಜಿಲಾಕರ್ನ ಅಧಿಕೃತ ವೆಬ್ಸೈಟ್ ಮಾತ್ರ ಬಳಸಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆಧಾರ್ ಸಂಖ್ಯೆ ಹೊಂದಿರುವ ಯಾರಾದರೂ ಡಿಜಿಲಾಕರ್ನಲ್ಲಿ ಖಾತೆ ತೆರೆಯಬಹುದಾಗಿದ್ದು, ಶಿಕ್ಷಣ ಪ್ರಮಾಣಪತ್ರಗಳು ಸೇರಿದಂತೆ ಹಲವು ಪ್ರಮುಖ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಡಲು ಈ ಸೇವೆ ಸಹಕಾರಿಯಾಗಿದೆ.
ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆ, ಅಪರಿಚಿತ ಲಿಂಕ್ಗಳು ಮತ್ತು ಅನುಮಾನಾಸ್ಪದ ವೆಬ್ಸೈಟ್ಗಳ ಬಗ್ಗೆ ಹೆಚ್ಚು ಜಾಗರೂಕತೆಯಿಂದ ಇರಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.



