May 24, 2026
Sunday, May 24, 2026
spot_img

ಬಾಂಧವಗಢದಲ್ಲಿ ಹುಲಿ ಅಟ್ಟಹಾಸಕ್ಕೆ ಮಹಿಳೆ ಬಲಿ: ‘ನರಭಕ್ಷಕ’ನ ಸೆರೆಗೆ ಸ್ಕೆಚ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಧ್ಯಪ್ರದೇಶದ ಪ್ರಸಿದ್ಧ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಸಮೀಪವಿರುವ ಪನ್‌ಪಥಾ ಗ್ರಾಮದಲ್ಲಿ ಇಂದು ಮುಂಜಾನೆ ಭೀಕರ ಹುಲಿ ದಾಳಿ ನಡೆದಿದ್ದು, ಇಡೀ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಪನ್‌ಪಥಾ ಗ್ರಾಮದ ಖೇರ್ವಾ ತೋಲಾ ವಸತಿ ಪ್ರದೇಶಕ್ಕೆ ಮುಂಜಾನೆ ಸುಮಾರು 3 ಗಂಟೆಗೆ ಹುಲಿಯೊಂದು ಏಕಾಏಕಿ ನುಗ್ಗಿದೆ. ನಿದ್ದೆಯಲ್ಲಿದ್ದ ಜನರ ಮೇಲೆ ದಾಳಿ ನಡೆಸಿದ ಹುಲಿ, 40 ವರ್ಷದ ಫೂಲ್ ಬಾಯಿ ಪಾಲ್ ಎಂಬ ಮಹಿಳೆಯನ್ನು ಸ್ಥಳದಲ್ಲೇ ಕೊಂದಿದೆ. ದಾಳಿಯಲ್ಲಿ ಇತರ ನಾಲ್ವರು ಗ್ರಾಮಸ್ಥರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅರಣ್ಯ ಸಿಬ್ಬಂದಿ ವಿರುದ್ಧ ತಿರುಗಿಬಿದ್ದ ಜನ

ಹುಲಿ ದಾಳಿಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಯ ಉದಾಸೀನತೆಯ ವಿರುದ್ಧ ಭಾರಿ ಪ್ರತಿಭಟನೆ ನಡೆಸಿದರು. ಸಹಾಯಕ್ಕಾಗಿ ಪದೇ ಪದೇ ಕರೆ ಮಾಡಿದರೂ ಅಧಿಕಾರಿಗಳು ಸಕಾಲದಲ್ಲಿ ಸ್ಥಳಕ್ಕೆ ಧಾವಿಸಿಲ್ಲ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪನ್‌ಪಥಾ ವಲಯದ ಅರಣ್ಯ ರೇಂಜರ್ ಪ್ರತೀಕ್ ಶ್ರೀವಾಸ್ತವ ಮೇಲೆ ಜನರು ತೀವ್ರ ಹಲ್ಲೆ ನಡೆಸಿದ್ದು, ಅವರಿಗೆ ಗಾಯಗಳಾಗಿವೆ. ಜೊತೆಗೆ ಮಹಿಳಾ ಅರಣ್ಯ ಸಿಬ್ಬಂದಿಯೊಬ್ಬರೊಂದಿಗೂ ಅಸಭ್ಯವಾಗಿ ವರ್ತಿಸಿ, ಅವರು ಸ್ಥಳದಿಂದ ಹೋಗದಂತೆ ತಡೆಯೊಡ್ಡಲಾಗಿದೆ.

ಇದನ್ನೂ ಓದಿ:

ಶವಪರೀಕ್ಷೆಗೆ ತಡೆ; ರಕ್ಷಣಾ ಕಾರ್ಯಾಚರಣೆ ವಿಳಂಬ

ಗ್ರಾಮಸ್ಥರ ಭಾರಿ ಆಕ್ರೋಶದಿಂದಾಗಿ ಸ್ಥಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಪ್ರತಿಭಟನಾಕಾರರು ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಪೊಲೀಸರಿಗೆ ಮತ್ತು ಅಧಿಕಾರಿಗಳಿಗೆ ಬಿಡುತ್ತಿಲ್ಲ. ಇದರಿಂದಾಗಿ ಗ್ರಾಮದ ಸುತ್ತಮುತ್ತಲೇ ಅಲೆದಾಡುತ್ತಿರುವ ಹುಲಿಯನ್ನು ಸೆರೆಹಿಡಿಯುವ ಅರಣ್ಯ ಇಲಾಖೆಯ ಕಾರ್ಯಾಚರಣೆಯೂ ವಿಳಂಬವಾಗಿದೆ.

ಪೊಲೀಸ್ ಬಿಗಿ ಬಂದೋಬಸ್ತ್

ಸ್ಥಳಕ್ಕೆ ಬಂದ ಜಿಲ್ಲಾ ಪಂಚಾಯತ್ ಸದಸ್ಯೆ ರೋಶ್ನಿ ಸಿಂಗ್ ಧುರ್ವೆ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ಅರಣ್ಯ ಸಿಬ್ಬಂದಿಯನ್ನು ಜನರ ವಶದಿಂದ ಮುಕ್ತಗೊಳಿಸಲು ನೆರವಾಗಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !