ಹೊಸ ದಿಗಂತ ವರದಿ, ಕಾರವಾರ:
ಹೊಳೆಯಲ್ಲಿ ಚಿಪ್ಪುಮೀನು, ಕಪ್ಪೆಚಿಪ್ಪು ಆರಿಸಲು ಇಳಿದ 8 ಜನರು ನೀರಿನ ಸೆಳೆತಕ್ಕೆ ಕೊಚ್ಚಿಹೋಗಿ ಮೃತ ಪಟ್ಟ ಘಟನೆ ಭಟ್ಕಳ ತಾಲೂಕಿನ ಶಿರಾಲಿ ಅಳಿವೆಕೋಡಿ ಬಳಿ ಸಂಭವಿಸಿದೆ.
ಮೃತರಲ್ಲಿ ಏಳು ಜನ ಮಹಿಳೆಯರಾಗಿದ್ದು, ಇವರೆಲ್ಲ ಪ್ರತಿದಿನದಂತೆ ಕಳಿನಟ್ಟಿ ಹೊಳೆಯಲ್ಲಿ ಕಪ್ಪೆ ಚಿಪ್ಪು ಆರಿಸಲು ನೀರಿಗಿಳಿದಿದ್ದರು.
ನದಿಯಲ್ಲಿ ನೀರಿನ ಸೆಳೆತ ಹೆಚ್ಚಳ
ರಾತ್ರಿ ಇಡೀ ಮಳೆ ಸುರಿದ ಕಾರಣ ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು, ಇದರಿಂದಾಗಿ ಪರಸ್ಪರ ಕೈ ಹಿಡಿದು ಇಳಿದ ಎಲ್ಲರೂ ನೀರಿನಲ್ಲಿ ಕೊಚ್ಚಿಹೋಗಿ ಆಳ ಪ್ರದೇಶದಲ್ಲಿ ಮುಳುಗಿದ್ದಾರೆ.
8 ಮೃತದೇಹಗಳು ಅಳಿವೆಕೋಡಿ ಬಳಿ ಪತ್ತೆಯಾಗಿದ್ದು, ಮೃತರನ್ನು ಬೇಂಗ್ರೆಯ ಲಕ್ಷ್ಮೀ ಮಾದೇವ ನಾಯ್ಕ (42), ಲಕ್ಷ್ಮೀ ಅಣ್ಣಪ್ಪ ನಾಯ್ಕ(60), ಲಕ್ಷ್ಮೀ ಶಿವರಾಮ ನಾಯ್ಕ(49), ಜ್ಯೋತಿನಾಯ್ಕ(34), ಮಾಲತಿ ನಾಯ್ಕ(38) ಮಾಸ್ತಮ್ಮ ನಾಯ್ಕ, ಲಕ್ಷ್ಮೀ ನಾಯ್ಕ, ಶಾರದಹೊಳೆಯ ಉಮೇಶ ನಾಯ್ಕ(30) ಎಂದು ಗುರುತಿಸಲಾಗಿದೆ.
ಇನ್ನೂ ಹಲವಾರು ನಾಪತ್ತೆಯಾಗಿರುವ ಶಂಕೆ
ನೀರಿನ ಸೆಳೆತಕ್ಕೆ ಸಿಲುಕ್ಕಿದ್ದ ನಾಗರತ್ನ ಮತ್ತು ಮಹಾದೇವಿ ಎನ್ನುವವರನ್ನು ರಕ್ಷಣೆ ಮಾಡಲಾಗಿದ್ದು, ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕೆಲವರು ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಿದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ.



