October 18, 2026
Sunday, October 18, 2026
spot_img

ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: 2028-29ರ ವೇಳೆಗೆ ಪೂರ್ಣಗೊಳ್ಳಲಿದೆ ಈ ಪ್ರಮುಖ ರೈಲ್ವೆ ಯೋಜನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (CCEA) ಕರ್ನಾಟಕ ಹಾಗೂ ಆಂಧ್ರಪ್ರದೇಶ ನಡುವಿನ ಸಂಪರ್ಕ ವೃದ್ಧಿಗೆ ಹೊಸ ಯೋಜನೆಯೊಂದನ್ನು ಘೋಷಿಸಿದೆ. ಬಳ್ಳಾರಿಯಿಂದ ಗುಂತಕಲ್ ಭಾಗಕ್ಕೆ ಸಂಪರ್ಕ ಕಲ್ಪಿಸುವ 1,264 ಕೋಟಿ ರೂಪಾಯಿ ಮೌಲ್ಯದ ಮೂರನೇ ಮತ್ತು ನಾಲ್ಕನೇ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಯೋಜನೆಯ ಪ್ರಮುಖ ವಿವರಗಳು ಮತ್ತು ವ್ಯಾಪ್ತಿ

ಪಿಎಂ ಗತಿ ಶಕ್ತಿ ರಾಷ್ಟ್ರೀಯ ಯೋಜನೆಯ ಭಾಗವಾಗಿ ಅನುಷ್ಠಾನಗೊಳ್ಳುತ್ತಿರುವ ಈ 46 ಕಿಲೋಮೀಟರ್ ಉದ್ದದ ‘ಮಲ್ಟಿ-ಟ್ರ್ಯಾಕಿಂಗ್’ ಪ್ರಾಜೆಕ್ಟ್ 2028-29ರ ಹೊತ್ತಿಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಹಳಿಗಳು ಕರ್ನಾಟಕದ ಬಳ್ಳಾರಿ ಸೇರಿದಂತೆ ಆಂಧ್ರದ ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳಲ್ಲಿ ಹಾದುಹೋಗಲಿದ್ದು, ಅಂದಾಜು 99 ಹಳ್ಳಿಗಳ 7 ಲಕ್ಷಕ್ಕೂ ಅಧಿಕ ಜನರಿಗೆ ಸುಲಭ ಸಂಚಾರ ವ್ಯವಸ್ಥೆ ಕಲ್ಪಿಸಲಿದೆ.

ಸಾರಿಗೆ ಮತ್ತು ಸರಕು ಸಾಗಣೆಗೆ ಹೊಸ ಶಕ್ತಿ

ಈ ಹೊಸ ಹಳಿಗಳ ನಿರ್ಮಾಣದಿಂದ ರೈಲು ಮಾರ್ಗಗಳ ದಟ್ಟಣೆ ಕಡಿಮೆಯಾಗುವುದಲ್ಲದೆ, ಪ್ರಾದೇಶಿಕ ಉದ್ಯಮಗಳಿಗೆ ಸರಕು ಸಾಗಣೆ ಪ್ರಕ್ರಿಯೆ ಮತ್ತಷ್ಟು ವೇಗ ಪಡೆಯಲಿದೆ. ಈ ಬೃಹತ್ ಮೂಲಸೌಕರ್ಯ ಅಭಿವೃದ್ಧಿಯು ಉಭಯ ರಾಜ್ಯಗಳ ವ್ಯಾಪಾರ ಹಾಗೂ ಉದ್ಯೋಗ ಸೃಷ್ಟಿಗೆ ಹೊಸ ಉತ್ತೇಜನ ನೀಡಲಿದೆ.

Must Read