ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆಫ್ರಿಕನ್ ದೇಶಗಳಲ್ಲಿ ಎಬೋಲಾ ವೈರಸ್ ದಿನೇ ದಿನೇ ಹೆಚ್ಚುತ್ತಲ್ಲೇ ಇದ್ದು, ಇತ್ತ ಭಾರತದಲ್ಲೂ ಇದರ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಈಗಾಗಲೇ ಹಲವು ಕಟ್ಟೆಚ್ಟರ ಸೂಚನೆಯನ್ನು ನೀಡಿದ್ದು, ಈ ಬೆನ್ನಲ್ಲೇ ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಪ್ರಯಾಣಿಕರ ಮೇಲೆ ನಿಗಾ
ಸದ್ಯ ರಾಜ್ಯದಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗದಿದ್ದರೂ ಮುನ್ನೆಚ್ಚರಿಕೆಯಲ್ಲಿ ಇರಲು ಆರೋಗ್ಯ ಅಧಿಕಾರಿಗಳು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಎಬೋಲಾ ಸೋಂಕು ವರದಿಯಾಗಿರುವ ಪ್ರದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸುವಂತೆ ಸಾರ್ವಜನಿಕ ಆರೋಗ್ಯ ಮತ್ತು ನಿಯಂತ್ರಣ ಔಷಧ ನಿರ್ದೇಶನಾಲಯ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದೆ.
ವಿಮಾನ ನಿಲ್ದಾಣಗಳಲ್ಲಿ ತಪಾಸಣೆ
ಈಗಾಗಲೇ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಶಂಕಿತ ಪ್ರಕರಣಗಳನ್ನು ಎದುರಿಸಲು ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳು ಮತ್ತು ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ಸಜ್ಜುಗೊಳಿಸಲಾಗಿದೆ.



